ಅಂತರ್ಜಲ ಹೆಚ್ಚಿಸುವ ಯೋಜನೆಗೆ ₹25 ಕೋಟಿ ಮೀಸಲು

KannadaprabhaNewsNetwork |  
Published : Jan 26, 2026, 04:30 AM IST
ಬೋಸರಾಜು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ತಾಲೂಕಿನ ಪೂರ್ವ ವಿವಿಧ ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಬೋರ್ವೆಲ್‌ಗಳಿಗೆ ನೀರು ತುಂಬಿಸುವ ವಿನೂತನ ತಂತ್ರಜ್ಞಾನದ ಯೋಜನೆಗೆ ಸಣ್ಣ ನೀರಾವರಿ ಇಲಾಖೆಯ ಸಹಕಾರವಿದ್ದು, ಸಿಎಂ ಹಾಗೂ ಡಿಸಿಎಂ ಜೊತೆ ಮಾತನಾಡಿ ಬಜೆಟ್ ನಲ್ಲಿ ₹ 25 ಕೋಟಿ ಅನುದಾನ ಮೀಸಲಿಡುತ್ತೇವೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಪೂರ್ವ ವಿವಿಧ ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಬೋರ್ವೆಲ್‌ಗಳಿಗೆ ನೀರು ತುಂಬಿಸುವ ವಿನೂತನ ತಂತ್ರಜ್ಞಾನದ ಯೋಜನೆಗೆ ಸಣ್ಣ ನೀರಾವರಿ ಇಲಾಖೆಯ ಸಹಕಾರವಿದ್ದು, ಸಿಎಂ ಹಾಗೂ ಡಿಸಿಎಂ ಜೊತೆ ಮಾತನಾಡಿ ಬಜೆಟ್ ನಲ್ಲಿ ₹ 25 ಕೋಟಿ ಅನುದಾನ ಮೀಸಲಿಡುತ್ತೇವೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಭರವಸೆ ನೀಡಿದರು.

ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ₹ 140 ಕೋಟಿ ವೆಚ್ಚದಲ್ಲಿ 7 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವೀಕ್ಷಿಸಿ ಬಾಗಿನ ಅರ್ಪಿಸಿ ಮಾತನಾಡಿದರು. ರಾಜ್ಯದಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಪ್ರದೇಶಗಳನ್ನು ಗುರುತಿಸಿ ಸಣ್ಣ ನೀರಾವರಿ ಇಲಾಖೆಯಿಂದ 8 ಸಾವಿರಕ್ಕೂ ಅಧಿಕ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವುದು, ಚೆಕ್ ಡ್ಯಾಂಗಳ ನಿರ್ಮಾಣ, ನಾಲಾ ಗಳಿಗೆ ಬಾಂದಾರ್ ನಿರ್ಮಾಣ ಸೇರಿ ಇನ್ನಿತರ ಯೋಜನೆಗಳನ್ನು ರೂಪಿಸಲಾಗಿದೆ. ಈ ಭಾಗದ ಶಾಸಕ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಬರಗಾಲದ ನಾಡು ಕಂಗೊಳಿಸುತ್ತಿರುವುದು ನನಗೆ ಸಂತಸ ತಂದಿದೆ. ಬೋರ್ವೆಲ್‌ಗಳಿಗೆ ನೀರು ತುಂಬಿಸುವ ವಿನೂತನ ತಂತ್ರಜ್ಞಾನದ ಯೋಜನೆಗೆ ₹ 25 ಕೋಟಿ ಸರ್ಕಾರದಿಂದ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ತಾಲೂಕಿನ ಈ ಪೂರ್ವ ಭಾಗದ ಹಳ್ಳಿಗಳಲ್ಲಿ 2004ರಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇತ್ತು. ನಾನು ಬಿಜೆಪಿಯಲ್ಲಿದ್ದ ಸಂದರ್ಭದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು 46 ಗ್ರಾಮಗಳಿಗೆ ಅನುಷ್ಠಾನ ಮಾಡಬೇಕಾದರೆ ಅಂದಿನ ಸಿಎಂ ಧರ್ಮಸಿಂಗ್ ಹಾಗೂ ಸಚಿವರಾಗಿದ್ದ ಎನ್.ಎಸ್.ಬೋಸರಾಜು ಅವರ ಸಹಕಾರ ಬಹಳ ಮುಖ್ಯವಾಗಿತ್ತು. ಇಂದು ಏಳು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅವರ ಸಹಕಾರದಿಂದಲೇ ₹140 ಕೋಟಿ ಅನುದಾನ ಬಂದಿದೆ. ಈ ಯೋಜನೆಯ ಅನುಷ್ಠಾನದಿಂದ ರೈತರ ಮುಖದಲ್ಲಿನ ಹರ್ಷ ಕಂಡು ಅವರಿಗೆ ಮತ್ತು ನನಗೆ ಸಂತಸವಾಗಿದೆ. ಈ ಭಾಗದ ರೈತರ ಪರವಾಗಿ ರಾಜ್ಯ ಸರ್ಕಾರಕ್ಕೆ ಮತ್ತು ಸಣ್ಣ ನೀರಾವರಿ ಸಚಿವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಚಿವ ಬೋಸರಾಜುಗೆ ರೈತರು ಬೆಳ್ಳಿ ಗದೆ ನೀಡಿ ಸನ್ಮಾನಿಸಿ, ಅಭಿನಂದಿಸಿದರು. ಇಲಾಖೆ ನಿವೃತ್ತ ಅಭಿಯಂತ ಶ್ರೀಕಾಂತ ಮಾಕಾಣಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಆತ್ಮರಾಮ್ ಸ್ವಾಮೀಜಿ, ಬಾಲ್ಕಿಯ ಸಿದ್ದರಾಮೇಶ್ವರ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಬಬಿತಾ ಮರಗಾಳಿ, ಮುಖಂಡರಾದ ಎಸ್.ಕೆ.ಬೂಟಾಳಿ, ಪರಪ್ಪ ಸವದಿ, ಸಿ.ಎಸ್.ನೇಮಗೌಡ, ಸಿದ್ದರಾಯ ಎಲ್ಲಡಗಿ, ಗುರಪ್ಪ ದಶ್ಯಳ, ಶಾಮ ಪೂಜಾರಿ, ಮಲ್ಲಪ್ಪ ಡೆಂಗಿ, ದತ್ತ ವಾಸ್ಟಾರ, ಪ್ರಕಾಶ್ ಮಹಾಜನ, ಸಂಗಯ್ಯ ಪೂಜಾರಿ, ಶಿವಾನಂದ ಗುಡ್ಡಾಪುರ, ಇಲಾಖೆ ಅಧಿಕಾರಿಗಳಾದ ಬಿ.ಕೆ.ಪವಿತ್ರ, ಎಚ್.ಎಲ್.ವೆಂಕಟೇಶ್, ಪ್ರವೀಣ್ ಪಾಟೀಲ, ಗುತ್ತಿಗೆದಾರ ಸಂತೋಷ್ ಗಾಣಿಗೇರಿ ಸೇರಿ ರೈತರು ಮುಖಂಡರು ಇದ್ದರು. ಶಿವಾನಂದ ಗುಡ್ಡಾಪುರ ಸ್ವಾಗತಿಸಿದರು, ಸಂಗಯ್ಯ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ವಿಜಯ ಹುದ್ದಾರ ನಿರೂಪಿಸಿ, ವಂದಿಸಿದರು.

--------

ಬಾಕ್ಸ್

ಅಂತರ್ಜಲ ಮಟ್ಟ ಕುಸಿತಈ ಭಾಗದಲ್ಲಿ 300 ಅಡಿ ಇದ್ದ ಅಂತರ್ಜಲ ಮಟ್ಟ ಈಗ ಕುಸಿದಿದ್ದು, 1000 ಅಡಿ ಬೋರ್ವೆಲ್ ಕೊರೆದರು ನೀರು ಸಿಗುತ್ತಿಲ್ಲ. ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಇದಲ್ಲದೇ ಬೋರ್ವೆಲ್ ಗಳಿಗೆ ನೀರು ತುಂಬಿಸುವ ವಿನೂತನ ಮಾದರಿಯ ಯೋಜನೆಗಳನ್ನು ಜಾರಿಗೆ ತರಲು ₹ 25 ಕೋಟಿ ಅನುದಾನ ಬೇಕಾಗುತ್ತದೆ. ಚಿಕ್ಕ ನೀರಾವರಿ ಇಲಾಖೆಯಿಂದ ಅದನ್ನು ಒದಗಿಸುವ ಮೂಲಕ ಈ ಭಾಗದ ರೈತರ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಸಹಕರಿಸುವಂತೆ ಲಕ್ಷ್ಮಣ ಸವದಿ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತ್ತೂರು ಬಸಿಲಿಕಾದಲ್ಲಿ ಸಂತ ಲಾರೆನ್ಸ್ ವಾರ್ಷಿಕ ಮಹೋತ್ಸವ ಆರಂಭ
ಯುವಜನತೆಗೆ ಧಾರ್ಮಿಕ ಶಿಕ್ಷಣದ ಅಗತ್ಯವಿದೆ - ಕೇಮಾರು ಶ್ರೀ