)
ಗದಗ: ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಜೋಕಾಲಿ ಮುರಿದು ಬಿದ್ದು 22 ಜನರಿಗೆ ಗಾಯಗಳಾಗಿದ್ದು, ಅವರೆಲ್ಲರಿಗೂ ಮೂರು ದಿನದೊಳಗೆ ₹25 ಲಕ್ಷ ಪರಿಹಾರ ನೀಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಗಾಯಾಳುಗಳ ಜತೆ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಮಠದ ಗದ್ದುಗೆಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಎಚ್ಚರಿಸಿದರು.
ಓರ್ವ 18 ವರ್ಷದ ಹುಡುಗನ ಸೊಂಟ ಮುರಿದಿದೆ. 6 ವರ್ಷದ ಬಾಲಕನ ತಲೆಗೆ ಪೆಟ್ಟು ಬಿದ್ದಿದೆ. ಇವರೆಲ್ಲರನ್ನು ಜೀಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತಿದೆ. ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಸ್ಕ್ಯಾನಿಂಗ್ ಮಾಡಲು ₹2,500 ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್ ಇಲಾಖೆ ಸುಮಾರು 7-8 ಜನರನ್ನು ಅಂದೇ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿದ್ದಾರೆ. ಎಸ್ಪಿ ಅವರು ಈ ಬಗ್ಗೆ ಗಮನ ಹರಿಸಬೇಕು. ಘಟನೆ ನಡೆದು ಮೂರ್ನಾಲ್ಕು ದಿನ ಕಳೆದರೂ ಅನಾಹುತಕ್ಕೆ ಕಾರಣವಾದ ವಸ್ತುಗಳನ್ನು ಇದುವರೆಗೂ ಸೀಜ್ ಮಾಡಿಲ್ಲ. ನೇರವಾಗಿ ಎಸ್ಪಿ ಅವರು ಮಧ್ಯೆಪ್ರವೇಶಿಸಿ ಡ್ಯಾನ್ಸಿಂಗ್ ಜೋಕಾಲಿ ಸೀಜ್ ಮಾಡಬೇಕು. ಇಲ್ಲದಿದ್ದರೆ ಪೊಲೀಸ್ ಇಲಾಖೆ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದರು.ಈ ವೇಳೆ ಮಾದಿಗ ಸಂಘರ್ಷ ಸಮಿತಿಯ ರಾಘವೇಂದ್ರ ಪರಾಪೂರ, ಮಹೇಶ ರೋಖಡೆ, ಪಿ.ಎಸ್. ಕಾಳೆ, ವಿಶ್ವನಾಥ ಶಿರಿ, ಗೀತಾ ನವಲಗುಂದ, ಸುಮನ್ ನವಲಗುಂದ, ಕುಮಾರ ನಡಗೇರಿ, ಸತೀಶ್ ಕುಂಬಾರ, ರಮೇಶ ನವಲಗುಂದ, ಮಂಜು ನವಲಗುಂದ, ಶಂಕರ ಗಬ್ಬೂರ, ವಿಜಯ ದಲಬಂಜನ್, ಕಿರಣ್ ಕಬಾಡಿ ಸೇರಿದಂತೆ ಹಲವರು ಇದ್ದರು.ಗಾಯಾಳುಗಳಿಗೆ ಸಂಕನೂರ ಸಾಂತ್ವನ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 18 ಗಾಯಾಳುಗಳಲ್ಲಿ ಇಬ್ಬರಿಗೆ ಮಾತ್ರ ಹೆಚ್ಚಿನ ಚಿಕಿತ್ಸೆ ಮಾಡಬೇಕಾಗಿದ್ದು, ಉಳಿದವರನ್ನು 3- 4 ದಿನಗಳಲ್ಲಿ ಡಿಸ್ಚಾರ್ಜ್ ಮಾಡುವುದಾಗಿ ಆಸ್ಪತ್ರೆಯ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ ತಿಳಿಸಿದರು.ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ಎಲುಬು ಕೀಲು ವೈದ್ಯ ಮಹಾಂತೇಶ ಪಾಟೀಲ ಹಾಗೂ ಜನರಲ್ ಸರ್ಜನ್ ಸುನೀಲ ತೇಲಕರ ಜತೆ ಮಾತನಾಡಿ, ಹೆಚ್ಚಿನ ಕಾಳಜಿ ವಹಿಸಿ ಚಿಕಿತ್ಸೆ ನೀಡಲು ಮನವಿ ಮಾಡಿದರು.