ಮಾರುಕಟ್ಟೆಗೆ ಬರುತ್ತಿದ್ದ ಹೂವಿನ ಪ್ರಮಾಣದಲ್ಲಿ ಶೇ.25 ಇಳಿಕೆ

KannadaprabhaNewsNetwork | Updated : Mar 20 2024, 12:47 PM IST

ಸಾರಾಂಶ

ನೀರಿನ ಅಭಾವದಿಂದ ಕೆ.ಆರ್‌.ಮಾರುಕಟ್ಟೆ ಸೇರಿ ನಗರದ ಪ್ರಮುಖ ಹೂವಿನ ಮಾರುಕಟ್ಟೆಗಳಿಗೆ ಹೂವುಗಳ ಪೂರೈಕೆ ಶೇಕಡ 25ರಷ್ಟು ಕಡಿಮೆಯಾಗಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಹೂವುಗಳ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ.

ಮಯೂರ್ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರು

ನೀರಿನ ಅಭಾವದಿಂದ ಕೆ.ಆರ್‌.ಮಾರುಕಟ್ಟೆ ಸೇರಿ ನಗರದ ಪ್ರಮುಖ ಹೂವಿನ ಮಾರುಕಟ್ಟೆಗಳಿಗೆ ಹೂವುಗಳ ಪೂರೈಕೆ ಶೇಕಡ 25ರಷ್ಟು ಕಡಿಮೆಯಾಗಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಹೂವುಗಳ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ.

ಬೋರ್‌ವೆಲ್‌ ಬತ್ತಿರುವುದು, ಬಿರುಬೇಸಿಗೆ ಕಾರಣಕ್ಕೆ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹೂವಿನ ಬೆಳೆ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜೊತೆಗೆ ತಮಿಳುನಾಡಿನಲ್ಲೂ ಇದೇ ಪರಿಸ್ಥಿತಿ ಇದೆ. ಹೀಗಾಗಿ ಬರುತ್ತಿದ್ದ ಹೂವಿನ ಪ್ರಮಾಣದಲ್ಲೂ ಇಳಿಕೆಯಾಗಿದೆ.

ಕೆರೆ ನೀರು, ಬೋರ್‌ವೆಲ್ ನಂಬಿಕೊಂಡೇ ಹೆಚ್ಚಿನ ರೈತರು ಹೂ ಬೆಳೆಯುತ್ತಾರೆ. ಸದ್ಯ ಹೂದೋಟಕ್ಕೆ ಅಗತ್ಯದಷ್ಟು ನೀರು ಹರಿಸಲಾಗದ ಕಾರಣ ಹೆಚ್ಚಿನ ಬೆಳೆ ಬರುತ್ತಿಲ್ಲ. ಜನವರಿ ತಿಂಗಳಲ್ಲಿ ಮಾರುಕಟ್ಟೆಗೆ ಉತ್ತಮ ಪ್ರಮಾಣದಲ್ಲಿ ಬಂದಿದ್ದ ಹೂವು ಫೆಬ್ರವರಿ ಮಧ್ಯಂತರದಿಂದ ಕಡಿಮೆಯಾಗಿದೆ.

ಮಾರುಕಟ್ಟೆ ಸಂಘದ ಅಧ್ಯಕ್ಷ ಜಿ.ಎಂ.ದಿವಾಕರ್‌ ಮಾತನಾಡಿ, ಸುತ್ತಮುತ್ತ ಹೆಚ್ಚು ಹೂವು ಬೆಳೆಯುವ ಪ್ರದೇಶಗಳಾದ ಗೌರಿಬಿದನೂರು, ಮಾಲೂರು, ಅತ್ತಿಬೆಲೆ, ಆನೇಕಲ್, ನೆಲಮಂಗಲ, ಕನಕಪುರ, ರಾಮನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಹೂವಿನ ಬೆಳೆ ಒಣಗಿರುವ ಮಾಹಿತಿಯಿದೆ. ಚಿಕ್ಕಬಳ್ಳಾಪುರದಲ್ಲಿ ಒಂದಿಷ್ಟರ ಮಟ್ಟಿಗೆ ಬೆಳೆಯಿದೆ. ಅಲ್ಲಿಂದ ಮಾರುಕಟ್ಟೆಗೆ ಹೂವು ಬರುತ್ತಿದೆ. ತಮಿಳುನಾಡಿನಲ್ಲೂ ಹೂ ಬೆಳೆ ಕಮರಿದೆ ಎಂದು ತಿಳಿಸಿದರು.

ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಗುಲಾಬಿ, ಸೇವಂತಿಗೆ, ಚೆಂಡು ಹೂವು, ಕಾಕಡ, ಕನಕಾಂಬರ, ಸುಗಂಧರಾಜ ಹೂವುಗಳಿಗೆ ಕೊರತೆ ಎದುರಾಗಿದೆ. ಹೀಗಾಗಿ, ನಗರದಲ್ಲಿ ಹೂವಿನ ಲಭ್ಯತೆ ಕಡಿಮೆಯಾಗಿದೆ ಎಂದು ಹೇಳಿದರು.

ಹೂವಿನ ವ್ಯಾಪಾರಿ ರಂಜಿತ್‌ ಮಾತನಾಡಿ, ಸದ್ಯಕ್ಕೆ ಸೀಸನ್‌ ಇಲ್ಲ. ಮಲ್ಲಿಗೆ ಕೇಜಿಗೆ ₹300-500, ಸೇವಂತಿಗೆ ₹180-200, ಸುಗಂಧರಾಜ ₹100 -₹80, ರೋಸ್‌ ₹100 ಬೆಲೆಯಿದೆ. 

ವ್ಯಾಪಾರವೂ ತುಂಬಾ ಕಡಿಮೆಯಿದೆ. ಯುಗಾದಿ ಬಳಿಕ ಮದುವೆ ಸೇರಿ ಇನ್ನಿತರ ಕಾರ್ಯಕ್ರಮಗಳು ಪ್ರಾರಂಭ ಆಗುತ್ತವೆ. ಆಗಲೂ ಇಷ್ಟೇ ಹೂವಿನ ಕೊರತೆ ಇದ್ದರೆ ವ್ಯಾಪಾರ ಕಷ್ಟವಾಗಲಿದೆ ಎಂದರು.

ಯುಗಾದಿ ಬಳಿಕ ಮದುವೆ ಸೀಸನ್‌ ಆರಂಭವಾಗಲಿದೆ. ಮುಂದಿನ ತಿಂಗಳಿಂದ ಬೇಸಿಗೆ ಪರಿಣಾಮ ಇನ್ನಷ್ಟು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಹೂವಿನ ಪ್ರಮಾಣ ಮತ್ತಷ್ಟು ಕಡಿಮೆ ಆಗಬಹುದು. ಇದರಿಂದ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ ಎಂದು ವರ್ತಕ ನಾಗರಾಜ್‌ ಹೇಳಿದರು.

ಕೆ.ಆರ್‌.ಮಾರುಕಟ್ಟೆಗೆ ಬರುತ್ತಿದ್ದ ಹೂವುಗಳ ಪ್ರಮಾಣ ಶೇ.25ರಷ್ಟು ಕಡಿಮೆಯಾಗಿದೆ. ಸಹಜವಾಗಿ ಇದು ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ.-ಜಿ.ಎಂ.ದಿವಾಕರ್‌, ಕೆ.ಆರ್‌.ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ.

Share this article