ಸೂಕ್ತ ಚಿಕಿತ್ಸೆಯಿಂದ ತಾಯಿ ಮಗುವಿನ ಜೀವ ಕಾಪಾಡೋಣ

KannadaprabhaNewsNetwork | Published : Mar 20, 2024 1:17 AM

ಸಾರಾಂಶ

ಪ್ರತಿ ಕುಟುಂಬದಲ್ಲಿ ಗರ್ಭಿಣಿಯಾದ ಮಹಿಳೆಗೆ ಪ್ರತಿ ತಿಂಗಳಿಗೊಮ್ಮೆ ಆಸ್ಪತ್ರೆಗೆ ತೋರಿಸಿದಾಗ ಗರ್ಭದಲ್ಲಿರುವ ಮಗು ಮತ್ತು ತಾಯಿ ಆರೋಗ್ಯವಾಗಿ ಇರುತ್ತದೆ.

ಹೊಸಪೇಟೆ: ವೈದ್ಯರು ನಿರ್ಲಕ್ಷ್ಯ ತೋರದೆ ಜಾಗರೂಕತೆಯಿಂದ ಚಿಕಿತ್ಸೆ ನೀಡಿದಾಗ ತಾಯಿ ಮತ್ತು ಮಗು ಜೀವ ಉಳಿಯುತ್ತದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಅವಿನಾಶ್ ಹೇಳಿದರು.ನಗರದ ತಾಪಂ ವಿದ್ಯಾರಣ್ಯ ಸಭಾಂಗಣದಲ್ಲಿ ಶುಕ್ರವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಚೈತನ್ಯ ಗ್ರಾಮೀಣಾಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣಾ ಕಾಯ್ದೆ-2022) ಕುರಿತು ವೈದ್ಯರು, ನರ್ಸ್ ಹಾಗೂ ಇತರೆ ಆಸ್ಪತ್ರೆ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರತಿ ಕುಟುಂಬದಲ್ಲಿ ಗರ್ಭಿಣಿಯಾದ ಮಹಿಳೆಗೆ ಪ್ರತಿ ತಿಂಗಳಿಗೊಮ್ಮೆ ಆಸ್ಪತ್ರೆಗೆ ತೋರಿಸಿದಾಗ ಗರ್ಭದಲ್ಲಿರುವ ಮಗು ಮತ್ತು ತಾಯಿ ಆರೋಗ್ಯವಾಗಿ ಇರುತ್ತದೆ. ನಿಮಗೆ ಬೇಡವಾದ ಮಗುವನ್ನು ಸರ್ಕಾರದ ತೊಟ್ಟಿಲಿಗೆ ಹಾಕಿ ನಿಮ್ಮ ಹೆಸರನ್ನು ಎಲ್ಲೂ ಬಹಿರಂಗ ಪಡಿಸುವುದಿಲ್ಲ ಹಸುಗೂಸನ್ನ ಎಲ್ಲೆಂದರಲ್ಲಿಬಿಸಾಡಬೇಡಿ ಆ ಮಗುವಿಗೆ ಕೂಡ ಬದುಕುವ ಹಕ್ಕು ಇದೆ. ಪ್ರತಿಯೊಂದು ಮಗುವಿಗೆ ಉತ್ತಮ ಆರೋಗ್ಯ ಮತ್ತು ಉತ್ತಮ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ಸಮಾಜದಲ್ಲಿ ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಗ್ಯಾರೇಜ್ ಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿರುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.ಯುನಿಸೆಫ್‌ನ ಸಂಯೋಜಕ ಕೊಪ್ಪಳ ಹರೀಶ್ ಜೋಗಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಬಾಲ್ಯ ವಿವಾಹ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ಕಾಯ್ದೆಯ ಕುರಿತು ಜಾಗೃತಿ ಮೂಡಿಸಬೇಕು. ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಪೋಕ್ಸೋ ಕಾಯ್ದೆ-2012ಅನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು. ಜೊತೆಗೆ ಈ ಕಾಯ್ದೆ ಅಂಶಗಳನ್ನು ಪ್ರಚುರಪಡಿಸಬೇಕಿದೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ವೇತಾ ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಧಿಕಾ ಮಾತನಾಡಿದರು.ತಾಪಂ ಸಹಾಯಕ ನಿರ್ದೇಶಕಿ ಶಮೀಮ್ ಬಾನು, ಪ್ರಾಸ್ತಾವಿಕವಾಗಿ ಜಿಲ್ಲಾ ಮಕ್ಕಳ ಘಟಕದ ರಕ್ಷಣಾಧಿಕಾರಿ ಸುದೀಪ್ ಕುಮಾರ್ ಮಾತನಾಡಿದರು.ಈ ಸಂದರ್ಭದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷ ಭೀಮರಾಜ ಯು., ಮಕ್ಕಳ ರಕ್ಷಣಾ ಘಟಕದ ಗಂಗಾಧರ್ ಡಿ, ಶರಣಪ್ಪ, ಶ್ರೀಕಾಂತ್‌, ಲಿಂಗರಾಜ, ಸಖಿ ಘಟಕ, ಆಸ್ಪತ್ರೆ ಸಿಬ್ಬಂದಿ ಭಾಗಿಯಾಗಿದ್ದರು.

Share this article