
ಇಂದರಪಾಶ ಚಿಂಚರಕಿ
ಮನೆ ಇದೆ, ಕುಟುಂಬವಿದೆ, ದಶಕಗಳ ಬದುಕಿನ ನೆನಪುಗಳಿವೆ.ಆದರೆ ಆ ಬದುಕಿಗೆ ಸರ್ಕಾರದ ದಾಖಲೆಗಳಲ್ಲಿ ಗಟ್ಟಿ ಗುರುತಿರಲಿಲ್ಲ. ಹೀಗಾಗಿ ಹಕ್ಕಿನ ದಾಖಲೆಗಾಗಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕಾಯುತ್ತಿದ್ದ ಮಸ್ಕಿ ತಾಲೂಕಿನ ತಾಂಡಾ ನಿವಾಸಿಗಳ ನಿರೀಕ್ಷೆಗೆ ಇದೀಗ ಹೊಸ ದಿಕ್ಕು ಸಿಕ್ಕಿದೆ.
ಮಸ್ಕಿ ತಾಲೂಕಿನ ಮೆದಕಿನಾಳ, ಮಾರಲದಿನ್ನಿ ವ್ಯಾಪ್ತಿ ಸೇರಿದಂತೆ 25 ದೊಡ್ಡಿ ಹಾಗೂ ತಾಂಡಾಗಳನ್ನು ನೂತನ ಕಂದಾಯ ಗ್ರಾಮಗಳನ್ನಾಗಿ ಮಾಡಿ ಹಕ್ಕುಪತ್ರ ವಿತರಣೆ ಮಾಡಿ ದಶಕಗಳಿಂದ ದಾಖಲೆಗಳಿಲ್ಲದೆ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಮುಕ್ತಿ ದೊರೆತಿದ್ದು, ಇಷ್ಟು ವರ್ಷಗಳ ಕಾಲ ವಾಸಿ ಸುತ್ತಿದ್ದರೂ ಸಮರ್ಪಕ ಕಂದಾಯ ದಾಖಲೆಗಳಿಲ್ಲದೆ ಹಲವು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದ ಕುಟುಂಬಗಳಿಗೆ ಹಕ್ಕುಪತ್ರ ದೊರೆಯುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ. ನೂತನ ಕಂದಾಯ ಗ್ರಾಮದ ಸ್ಥಾನಮಾನದಿಂದ ಗ್ರಾಮಗಳ ಆಡಳಿತಾತ್ಮಕ ಗುರುತು ಮತ್ತಷ್ಟು ಸ್ಪಷ್ಟವಾಗುವುದರ ಜತೆಗೆ ನಿವಾಸಿಗಳಿಗೆ ದಾಖಲೆಗಳ ಆಧಾರ ದೊರೆಯಲಿದೆ.ನೂತನ ಕಂದಾಯ ಗ್ರಾಮಗಳು: ತಾಲೂಕಿನ ಮೆದಕಿನಾಳ ಗ್ರಾಮ ಪಂಚಾಯತಿ ಹಾಗೂ ಮಾರಲದಿನ್ನಿ ವ್ಯಾಪ್ತಿಯಶಾಂತಿನಗರ (ಮೆದಕಿನಾಳ ತಾಂಡಾ) ರಮಣಭಾಯಿ ನಗರ (ಮ್ಯಾದರಾಳ ತಾಂಡಾ) ಹಾಗೂ ಮಾರುತಿನಗರ (ವೆಂಕಟಪುರ ತಾಂಡಾ)ಗಳನ್ನು ನೂತನ ಕಂದಾಯ ಗ್ರಾಮಗಳನ್ನಾಗಿ ರೂಪಿಸಲಾಗಿದೆ.
ಮಸ್ಕಿ ತಾಲೂಕಿನಲ್ಲಿ 25 ಪ್ರದೇಶಗಳನ್ನು ನೂತನ ಕಂದಾಯ ಗ್ರಾಮಗಳನ್ನಾಗಿ ಮಾಡುವ ಪ್ರಕ್ರಿಯೆ ಕೈಗೆತ್ತಿಕೊಂಡಿರುವುದು ತಾಂಡಾ–ದೊಡ್ಡಿಗಳ ಆಡಳಿತಾತ್ಮಕ ಗುರುತಿನ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಈಗಾಗಲೇ 18 ಗ್ರಾಮಗಳ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ಗ್ರಾಮಗಳ ಪ್ರಕ್ರಿಯೆಯೂ ಪೂರ್ಣಗೊಂಡರೆ ಇನ್ನಷ್ಟು ಕುಟುಂಬಗಳು ಅಧಿಕೃತ ಕಂದಾಯ ದಾಖಲೆ ವ್ಯವಸ್ಥೆಯೊಳಗೆ ಬರಲಿವೆ
ಇದೀಗ ನೂತನ ಕಂದಾಯ ಗ್ರಾಮಗಳಾಗಿ ಗುರುತಿಸಿಕೊಂಡಿವೆ. ಸುಮಾರು 929 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವುದರಿಂದ, ಹಲವು ವರ್ಷಗಳಿಂದ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ ಜನರಿಗೆ ಕಂದಾಯ ದಾಖಲೆಗಳ ಮೂಲಕ ಹಕ್ಕಿನ ಭದ್ರತೆ ಕಲ್ಪಿಸುವ ಉದ್ದೇಶ ಸಾಕಾರವಾಗಲಿದೆ.
ಮಸ್ಕಿ ತಾಲೂಕಿನ ತಾಂಡಾಗಳನ್ನು ಶಾಸಕರ ಸೂಚನೆಯಂತೆ ಕಂದಾಯ ಗ್ರಾಮಗಳನ್ನಾಗಿ ಮಾಡಿ ಎಲ್ಲಾ ಕುಟುಂಬಗಳಿಗೆ ದಾಖಲೆ ಪತ್ರಗಳನ್ನು ನೀಡಲಾಗು ತ್ತಿದೆ. ಇನ್ನುಳಿದ 6 ಕಂದಾಯ ಗ್ರಾಮಗಳನ್ನು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅವು ಕೂಡ ಆದಷ್ಟು ಬೇಗ ಕುಟುಂಬಗಳಿಗೆ ದಾಖಲೆ ಸಿಗುತ್ತವೆ ಎಂದು ಮಸ್ಕಿ ತಹಸೀಲ್ದಾರ್ ಭೋಗಾವತಿ ಹೇಳಿದರು.ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಖಾಸಗಿ ಜಾಗದಲ್ಲಿ ಯಾವುದೇ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ ಕುಟುಂಬಗಳಿಗೆ ಯಾವ ಮಧ್ಯವರ್ತಿಗಳಿಲ್ಲದೇ ಸರ್ಕಾರವೇ ಅವರ ಮನೆ ಬಾಗಿಲಿಗೆ ತೆರೆಳಿ ಅಧಿಕೃತ ದಾಖಲೆಗಳನ್ನು ಕೊಟ್ಟು ಅವರಿಗೆ ಭದ್ರತೆ ನೀಡಿದೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಬಡವರ ಹಿತ ಕಾಪಾಡಲು ಬದ್ಧವಾಗಿದೆ ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.25 - ಮಸ್ಕಿ ತಾಲೂಕಿನಲ್ಲಿ ನೂತನ ಕಂದಾಯ ಗ್ರಾಮಗಳಾಗಿ ಗುರುತಿಸಲಾದ ಗ್ರಾಮಗಳು
929 – ಹಕ್ಕುಪತ್ರ ಪಡೆಯಲಿರುವ ಕುಟುಂಬಗಳು,.