ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ನಗರ ವ್ಯಾಪ್ತಿಯಲ್ಲಿ ದಶಕಗಳಿಂದ ರಸ್ತೆಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗಿದ್ದ ಕಟ್ಟಡ ಮತ್ತು ಪಾರಂಪರಿಕ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶದಂತೆ ನಿರಂತರವಾಗಿ ನಡೆಯುತ್ತಿದ್ದು, ಶನಿವಾರವೂ ಸುಮಾರು ೨೫೦೦ ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂದು ನಗರಸಭೆ ಆಯುಕ್ತ ನವೀನ್ ಚಂದ್ರ ತಿಳಿಸಿದರು.ನಗರದ ಹೊರವಲಯದ ಬಂಗಾರಪೇಟೆ ಬೈಪಾಸ್‌ನಿಂದ ಬೇತಮಂಗಲ ಮೇಲ್ಸೇತುವೆವರೆಗಿನ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ, ಮಣಿಗಟ್ಟ, ಸ್ಯಾನಿಟೋರಿಯಂ ಪ್ರದೇಶ, ನಗರ ಬಸ್ ನಿಲ್ದಾಣದ ಹಿಂಭಾಗದ ಸರ್ವೇ ನಂ.೧೮೧ರ ವ್ಯಾಪ್ತಿಯಲ್ಲಿದ್ದ ಕಟ್ಟಡ ತ್ಯಾಜ್ಯ ಮತ್ತು ಪಾರಂಪರಿಕ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ೧೬ ಟಿಪ್ಪರ್, ೧೦ ಜೆಸಿಬಿ ಬಳಕೆ
ನಗರವನ್ನು ಸ್ವಚ್ಛ, ಸುಂದರ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ನಗರಸಭೆ ಕೈಗೊಂಡಿರುವ ಈ ಅಭಿಯಾನ ಮುಂದಿನ ದಿನಗಳಲ್ಲೂ ನಿರಂತರವಾಗಿ ಮುಂದುವರೆಯಲಿದೆ. ತ್ಯಾಜ್ಯವನ್ನು ದಶಕಗಳಿಂದ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದರ ಜೊತೆಗೆ, ಸಾರ್ವಜನಿಕರು ಸಹ ಸ್ವಚ್ಛತೆ ಕಾಪಾಡುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ತ್ಯಾಜ್ಯ ವಿಲೇವಾರಿ ಕಾರ್ಯದ ವೇಳೆ ಯೋಜನಾಧಿಕಾರಿ ಅಂಬಿಕಾ, ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಇದ್ದರು.