ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ವತಿಯಿಂದ ಆಯೋಜಿಸಿದ್ದ ತಲ್ಲಣಸದಿರುವ ಮನವೇ ಸಂಸ್ಕೃತಿ ಚಿಂತನ ಚಾರಣ ಕಾರ್ಯಕ್ರಮದಲ್ಲಿ ಪ್ರಸ್ತುತ ಭಾರತ ಮತ್ತುಗಾಂಧೀ ಚಿಂತನೆಗಳ ಪ್ರಸುತ್ತತೆ ಎಂಬ ವಿಷಯ ಕುರಿತು ಮಾತನಾಡಿದ ಅವರು, ಒಂದು ಕಾಲದಲ್ಲಿ ಭಾರತದ ರಾಜಕೀಯ ಸ್ವಾತಂತ್ರ,ಗ್ರಾಮ ಸ್ವರಾಜ್,ಅಸ್ಪೃಷ್ಯತೆ ನಿವಾರಣೆ, ಕೋಮು ಸೌಹಾರ್ದತೆಗಾಗಿ ಹೋರಾಟ ಮಾಡಿದ ಗಾಂಧೀಜಿ, ಇಂದು ಯಾರಿಗೂ ಬೇಡದ ನಾಯಕನಾಗಿದ್ದಾರೆ. ಮುಸ್ಲಿಂರನ್ನು ಪರ ಎಂಬ ಕಾರಣಕ್ಕೆ ಹಿಂದುಗಳು,ಪಾಕಿಸ್ತಾನ ವಿಭಜನೆಗೆ ಕಾರಣ ಎಂಬ ಕಾರಣಕ್ಕೆ ಮುಸ್ಲಿಂರು, ಅಂಬೇಡ್ಕರನ್ನು ವಿರೋಧಿಸಿದ್ದರು ಎಂದು ದಲಿತರು ಗಾಂಧೀಜಿಯನ್ನು ದೂರ ಇಟ್ಟಿದ್ದಾರೆ. ಆದರೆ ಗಾಂಧೀಜಿ ಅವರು ಪ್ರತಿಪಾದಿಸಿದ ಸ್ವಾತಂತ್ರ, ಸಮಾನತೆ, ಅಸ್ಪೃಶ್ಯತೆ ನಿವಾರಣೆ ಮತ್ತು ಕೋಮು ಸೌಹಾರ್ದತೆ ಇವುಗಳು ಇಂದಿಗೂ ಪೂರ್ಣಗೊಂಡಿಲ್ಲಎಂದರು.
1927 ರಲ್ಲಿ ಅತಿ ಅಸಮಾನತೆಯಿಂದ ಕೂಡಿದ ಮನುಸೃತಿಯನ್ನು ಅಂಬೇಡ್ಕರ್ ಸುಟ್ಟು ಹಾಕಿ, ಅದರ ಸ್ಥಾನದಲ್ಲಿ ಸಂವಿಧಾನವನ್ನು ತಂದು, ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಕನಸು ಕಂಡರು. ಆದರೆ ಮನುಸೃತಿಯನ್ನು ಮತ್ತೆ ಹುಟ್ಟು ಹಾಕುವ ಪ್ರಯತ್ನ ಈ ದೇಶದಲ್ಲಿ ನಡೆಯುತ್ತಿದೆಎಂದು ಕಳವಳ ವ್ಯಕ್ತಪಡಿಸಿದರು.ಅಸ್ಪೃಶ್ಯತೆ ಇಲ್ಲ ಎಂದು ಕೆಲವರಿದ್ದಾರೆ. ಆದರೆ ಜಾತಿಗಣತಿಯನ್ನು ವಿರೋಧಿಸುತ್ತಾರೆ.ಅಸ್ಪೃಶ್ಯತೆ ಈ ದೇಶಕ್ಕೆಅಂಟಿದ ರೋಗ. ಮೊದಲು ರೋಗವಿದೆ ಎಂಬು ಒಪ್ಪಿಕೊಳ್ಳಬೇಕು. ತದನಂತರ ಅದರ ಪರಿಹಾರಕ್ಕೆ ಪ್ರಯತ್ನಿಸಬೇಕೇ ಹೊರತು, ರೋಗವೇ ಇಲ್ಲ ಎಂಬುದು ಸರಿಯಲ್ಲ. ಅಸ್ಪೃಶ್ಯತೆ ಆಗೋಚರವಾಗಿ ವ್ಯಾಪಕವಾಗಿ ಹರಡಿದೆ. ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬ ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲ್ಲುವುದು ಇಂದಿಗೂ ಕಷ್ಟವಿದೆ. ಅಹಿಂದ ಎಂಬ ಘೋಷಣೆ ಕೇವಲ ರಾಜಕೀಯ ಲಾಭಕ್ಕೆ ನಡೆದರೆ ಪ್ರಯೋಜನವಿಲ್ಲ. ಅದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಸಾಹಿತ್ಯಕ, ಸಾಂಸ್ಕೃತಿಕ ವಲಯಗಳನ್ನು ಆವರಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯಎಂದು ದಿನೇಶ ಅಮೀನಮಟ್ಟು ತಿಳಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ದಲಿತ ಎಂಬ ಕಾರಣಕ್ಕೆ ನನ್ನನ್ನು ಸಿಎಂ ಹುದ್ದೆಯಿಂದ ವಂಚಿಸಲಾಗುತ್ತಿದೆ. ಅದೇ ರೀತಿ ಸಾಕಷ್ಟು ಜನರು ಸಹ ಜಾತಿಯ ಕಾರಣಕ್ಕೆ ಅವಕಾಶಗಳಿಂದ ವಂಚನೆಗೊಳಗಾಗಿದ್ದಾರೆ. ಇದನ್ನು ಯಾವ ಸಂಸ್ಕೃತಿ, ಪರಂಪರೆ ಎನ್ನಬೇಕು ಭಾರತೀಯ ಸಂಸ್ಕೃತಿ, ಪರಂಪರೆಯ ಹೆಸರಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಅನುಭವಿಸುವ ನೋವು, ಸಂಕಷ್ಟಗಳ ಬಗ್ಗೆ ಮಾತನಾಡದಿರುವುದು ಯಾವ ಭಾರತೀಯತೆ. ಇದೇನಾ ನಿಮ್ಮ ಸಹೋದರ, ಸಹೋದರಿಯನ್ನು ನಡೆಸಿಕೊಳ್ಳುವ ರೀತಿ ಎಂದು ಪರಮೇಶ್ವರ್ ಪ್ರಶ್ನಿಸಿದರು.
ಸಮಾಜದಲ್ಲಿ ಸಮಾನತೆ ತರಲು ಹಲವರು ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸಾಲಿಗೆ ಕಾಗಿನೆಲೆ ಕನಕ ಗುರುಪೀಠ ಸಹ ಒಂದು ಹೆಜ್ಜೆ ಮುಂದಿರಿಸಿದೆ. ಇದು ಕಠಿಣ ಹಾದಿ,ಇಂತಹ ಸ್ವಾಮೀಜಿಗಳ ಸಂಖ್ಯೆ ಹೆಚ್ಚಬೇಕು. ನಮ್ಮಲ್ಲಿ ಆದರ್ಶಗಳಿಗೆ, ವಿಚಾರಧಾರೆಗಳಿಗೆ ಕೊರತೆಯಿಲ್ಲ. ಆದರೆ ಅವುಗಳನ್ನು ಪಾಲಿಸುತ್ತಿಲ್ಲ. ಮನುಷ್ಯತ್ವ, ಮಾನವೀಯತೆ ಕಲಿಸುವ ಕೆಲಸ ಆಗಬೇಕು. ಸಮಾಜದ ಪರಿವರ್ತನೆಯಲ್ಲಿ ತೊಡಗುವವರನ್ನು ನಾನು ಎಂದಿಗೂ ಗೌರವಿಸುತ್ತೇನೆ. ಹಾಗಾಗಿ ಕಾಗಿನೆಲೆ ಗುರುಪೀಠದ ಎಲ್ಲಾ ಕಾರ್ಯಗಳಿಗೆ ಬೆಂಬಲವಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.ಕನಕದಾಸರ ಸಾಮಾಜಿಕ ಮತ್ತು ಅಧ್ಯಾತ್ಮಿಕತೆಗಳ ಅನುಸಂಧಾನ ಎಂಬ ವಿಷಯ ಮಂಡಿಸಿ ಮಾತನಾಡಿದ ಪ್ರೊ.ನಾಗೇಂದ್ರಕುಮಾರ್, ಭಕ್ತಿಗಳಲ್ಲಿ ಎರಡು ವಿಧ, ಶ್ರೀಮಂತರದ್ದು ಮತ್ತು ಬಡವರದ್ದು, ಕನಕದಾಸರ ಪ್ರಕಾರ ಭಕ್ತಿ ಎಂಬುದು ಏಕತೆ, ಭವ ಮೀರಿದ ಭಕ್ತಿ, ಸಮುದಾಯಗಳ ಒಳಗೆ ಬಂಧಿಸಲ್ಪಟ್ಟಿರುವ ಸಮಾಜ ಸುಧಾರಕರಗಳನ್ನು ಬಿಡುಗಡೆಗೊಳಿಸಬೇಕಿದೆ. ರಕ್ಷಿಸು ನಮ್ಮನ್ನು ಅನವರತ ಎಂದು ಎಲ್ಲರನ್ನು ಒಳಗೊಂಡಿದ್ದು ಕನಕದಾಸರ ಕೋರಿಕೆ. ಆಹಂಕಾರವನ್ನು ಬಿಟ್ಟವನೇ ನಿಜವಾದ ಭಕ್ತಿಎಂದರು.ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಡಾ.ರಮಣ್ ಹುಲಿನಾಯ್ಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ, ಕಾಗಿನೆಲೆ ಕನಕಗುರುಪೀಠದ ಶ್ರೀನಿರಂಜನಾನಂದಪುರಿ ಸ್ವಾಮೀಜಿ, ಡಾ.ಎಂ.ಆರ್.ಹುಲಿನಾಯ್ಕರ್, ಶಾಂತದುರ್ಗಾದೇವಿ ಹುಲಿನಾಯ್ಕರ್, ಡಾ.ಮಂಜಪ್ಪ ಮಾಗೋಡಿ ಮತ್ತಿತರರು ಉಪಸ್ಥಿತರಿದ್ದರು.