ದಾಬಸ್‍ಪೇಟೆ: ಮಕ್ಕಳಿಗೆ ಶಾಲೆಗಳು ಮೌಲ್ಯಯುತ ಶಿಕ್ಷಣ ನೀಡಿದರೆ ಪೋಷಕರು ಸಂಸ್ಕ್ರತಿ, ಸಂಸ್ಕಾರ ಕಲಿಸುವ ಕೆಲಸ ಮಾಡಬೇಕಿದ್ದು, ತಮ್ಮ ಒತ್ತಡದ ಬದುಕಿನ ಜೊತೆಗೆ ಮೊಬೈಲ್ ಗೀಳು ಬಿಟ್ಟು ಮಕ್ಕಳಿಗಾಗಿ ಸಮಯ ಮೀಸಲಿಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹೇಳಿದರು. ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ದಾಬಸ್‍ಪೇಟೆ ಪಬ್ಲಿಕ್ ಶಾಲೆ ವತಿಯಿಂದ ಆಯೋಜಿಸಿದ್ದ ತತ್ವ ಶೀರ್ಷಿಕೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ದಾಬಸ್‍ಪೇಟೆ ಪಬ್ಲಿಕ್ ಶಾಲೆ ಉತ್ತಮ ಫಲಿತಾಂಶ ನೀಡಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ತಯಾರು ಮಾಡುತ್ತಿರುವುದು ಶ್ಲಾಘನೀಯ, ಕುಟುಂಬದಲ್ಲಿನ ಸಮಸ್ಯೆಗಳನ್ನು ಮಕ್ಕಳೊಂದಿಗೆ ಪೋಷಕರು ಆರೋಗ್ಯಕರವಾಗಿ ಚರ್ಚಿಸಿದರೆ, ಸಮಸ್ಯೆ ಬಂದಾಗ ಎದುರಿಸುವ ಶಕ್ತಿ ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಜುಬೈರ್ ಅಹಮದ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುಜಾತ ನಾಗರಾಜು, ಪ್ರಾಂಶುಪಾಲರಾದ ಸಮೀನಾ ಬೇಗಂ, ಮುಖಂಡ ಖಲೀಂ ಉಲ್ಲಾ, ಸೈಯದ್ ಜೈಹಿಂದ್ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು, ಶಾಲಾ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು.