ಹುಬ್ಬಳ್ಳಿ :
ಬೆಳಗಾವಿಯಲ್ಲಿ ಡಿ. 27ರಂದು ನಡೆಯುವ ಗಾಂಧಿ ಭಾರತ ಸಮಾವೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಧಾರವಾಡ ಜಿಲ್ಲೆಯಿಂದಲೂ 25 ಸಾವಿರಕ್ಕೂ ಅಧಿಕ ಕಾರ್ಯಕರ್ತರನ್ನು ಕಳಿಸಿಕೊಡಬೇಕಿದೆ. ಬೂತ್, ಬ್ಲಾಕ್ ಮತ್ತು ಕ್ಷೇತ್ರವಾರು ಜನರನ್ನು ಹುರಿದುಂಬಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದರು.ಗಾಂಧಿ ಭಾರತ ಸಮಾವೇಶದ ಪೂರ್ವಭಾವಿಯಾಗಿ ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರ ಡಿ. 27ರಂದು ಅಧಿವೇಶನ ನಡೆದಿತ್ತು. ಅದರ ಸವಿ ನೆನಪಿಗಾಗಿ ಡಿ. 27ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ ಆಯೋಜಲಾಗಿದೆ ಎಂದರು.ಬೆಳಗಾವಿ ಕಾಂಗ್ರೆಸ್ ಅಧಿವೇಶನ ಭಾರತೀಯ ರಾಜಕಾರಣದಲ್ಲಿಯೇ ಐತಿಹಾಸಿಕ. ಸಿಡಬ್ಲೂಸಿ ಸದಸ್ಯರು, ಕೆಪಿಸಿಸಿ ಅಧ್ಯಕ್ಷರು, ಸದಸ್ಯರು ಭಾಗಿಯಾಗಲಿದ್ದಾರೆ. ಡಿ. 26ರಂದು ಸಿಡಬ್ಲೂಸಿ ಸಭೆ ನಡೆಯಲಿದ್ದು, ಕಾಂಗ್ರೆಸ್ ಐಡಿಯಾಲಜಿ ಕುರಿತು ಚರ್ಚೆ ಆಗಲಿದೆ. 27ರಂದು ಬಹಿರಂಗ ಸಮಾವೇಶ ನಡೆಯಲಿದೆ. ಸಮಾವೇಶವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ನಾವು ಎರಡೂ ಸದನದಲ್ಲಿ ಖಂಡಿಸಿದ್ದೇವೆ. ಮೋದಿ ಸರ್ಕಾರ ಆಡಳಿತಕ್ಕೆ ಬಂದು 11 ವರ್ಷಗಳಾದರೂ ದಲಿತರ ಮೇಲಿನ ದೌರ್ಜನ್ಯ ಕಡಿಮೆ ಆಗಿಲ್ಲ. ಅವರೆಲ್ಲ ದೇಶ ಉದ್ಧಾರ ಮಾಡುವವರಲ್ಲ. ಕೇವಲ ವೈಯಕ್ತಿಕ ಅಭಿವೃದ್ಧಿ ಹೊಂದುವವರು ಎಂದು ಟೀಕಿಸಿದರು. ಅಲ್ಲದೆ, ನಾವು ಸಮಾನತೆಯ ಬಗ್ಗೆ ಪ್ರೀತಿ, ಸೌಹಾರ್ದತೆಯ ಬಗ್ಗೆ ಮಾತನಾಡುತ್ತಿದ್ದೇವೆ. ಬಿಜೆಪಿಯವರು ದ್ವೇಷ ಹಬ್ಬಿಸುತ್ತಿದ್ದಾರೆ. ಹಿಂದೂ-ಮುಸ್ಲಿಂ, ಹಿಂದೂ-ಕ್ರಿಶ್ಚಿಯನ್ ಮಧ್ಯೆ ದ್ವೇಷ ಹೆಚ್ಚಿಸುವುದೇ ಅವರ ಅಜೆಂಡಾ ಎಂದರು.ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಮಾತನಾಡಿ, ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಕೇಂದ್ರ ಬಿಜೆಪಿ ಸರ್ಕಾರ, ಮುಂದಿನ ದಿನಗಳಲ್ಲಿ ಚುನಾವಣೆ ಇಲ್ಲದೇ ಆಯ್ಕೆಯಾಗುವ ಕನಸು ಕಾಣುತ್ತಿದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಲಿದ್ದು, ಪ್ರಜಾಪ್ರಭುತ್ವದ ಉಳಿವಿಗಾಗಿಯೇ "ಗಾಂಧಿ ಭಾರತ ಸಮಾವೇಶ " ಆಯೋಜಿಸಲಾಗಿದೆ ಎಂದರು.
ಹು-ಧಾ ಮಹಾನಗರ ಅಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಅಧ್ಯಕ್ಷ ಅನಿಲಕುಮಾರ್ ಪಾಟೀಲ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಕಾಂಗ್ರೆಸ್ ಮುಖಂಡರಾದ ದೀಪಕ ಚಿಂಚೋರೆ, ವಸಂತ ಲದ್ವಾ, ಸದಾನಂದ ಡಂಗನವರ, ಎಂ.ಎಸ್. ಅಕ್ಕಿ, ವಿನೋದ ಅಸೂಟಿ, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಸೇರಿದಂತೆ ಹಲವರಿದ್ದರು.