ಕನ್ನಡಪ್ರಭವಾರ್ತೆ ಕುಶಾಲನಗರ
ನದಿಯ ನೀರು ಕಲುಷಿತಗೊಳ್ಳದಂತೆ ಗಮನಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಉದ್ಯಮಿ ಎಸ್ ಎಲ್ ಎನ್ ವಿಶ್ವನಾಥ್ ಕರೆ ನೀಡಿದ್ದಾರೆ. ಅವರು ಕುಶಾಲನಗರ -ಕೊಪ್ಪ ಗಡಿ ಭಾಗದಲ್ಲಿ ರೋಟರಿ ಕುಶಾಲನಗರ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಕೊಪ್ಪ ಭಾರತ ಮಾತಾ ಪದವಿ ಕಾಲೇಜು, ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಐ ಲವ್ ಕಾವೇರಿ ಘೋಷ ವಾಕ್ಯದೊಂದಿಗೆ ನಡೆದ ಮೂರನೇ ವರ್ಷದ ಕಾವೇರಿ ನದಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾಗೃತಿ ಮೂಡಿಸುವ ಕಾರ್ಯರೋಟರಿ ಅಧ್ಯಕ್ಷರಾದ ಮನು ಪೆಮ್ಮಯ್ಯ ಮಾತನಾಡಿ, ಕುಶಾಲನಗರ ರೋಟರಿ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಒಂದು ತಿಂಗಳ ಕಾಲ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಪಟ್ಟಣದ ಸ್ವಚ್ಛತೆ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರಲ್ಲದೆ ಕೊಪ್ಪ ಕುಶಾಲನಗರ ಗಡಿಭಾಗದಲ್ಲಿರುವ ಪುರಾತನ ಕಾವೇರಿ ಸೇತುವೆಯ ಪುನಶ್ಚೇತನ ಕಾರ್ಯಕ್ರಮಕ್ಕೆ ಚಿಂತನೆ ಹರಿಸಲಾಗಿದೆ ಎಂದು ಹೇಳಿದರು.ಕಾರ್ಯಕ್ರಮ ಆಯೋಜಕ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್ ಮಾತನಾಡಿ, ಹಲವು ಕಾರಣಗಳಿಂದ ಜೀವನದಿ ಕಾವೇರಿ ನೇರವಾಗಿ ಮಲಿನಗೊಳ್ಳುತ್ತಿದ್ದು ಜನರಿಗೆ ನೀರಿನ ಬಳಕೆ ಮಾಡಲು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸ್ವಚ್ಛ ಕಾವೇರಿಗಾಗಿ ಪ್ರತಿಯೊಬ್ಬರು ಪಣತೊಡಬೇಕೆಂದರು. ಉದ್ಯಮಿ ಎಸ್ ಎಲ್ ಎನ್ ಸಾತಪ್ಪನ್, ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಪ್ರದೀಪ್ ಕುಮಾರ್ ಕುಶಾಲನಗರ ಗಡಿಭಾಗದ 180 ವರ್ಷಗಳ ಇತಿಹಾಸದ ಹಳೆಯ ಸೇತುವೆಯ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾರ್ಯಕ್ರಮಕ್ಕೆ ಶುಭ ಕೋರಿದರು.ಭಾರತ ಮಾತಾ ಪದವಿ ತಾಲೂಕಿನ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಬೋಧಕರು ರೋಟರಿ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು, ಕುಶಾಲನಗರ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಪ್ರಮುಖರು ಕಾವೇರಿ ಸೇತುವೆಯ ಕೆಳಭಾಗದಲ್ಲಿ ತುಂಬಿದ್ದ ತ್ಯಾಜ್ಯಗಳನ್ನು ತೆರವು ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕುಶಾಲನಗರ ಪುರಸಭೆ ಮತ್ತು ಕೊಪ್ಪ ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ವಾಹನಗಳ ಮೂಲಕ ತ್ಯಾಜ್ಯಗಳನ್ನು ಭುವನಗಿರಿ ಕೇಂದ್ರಕ್ಕೆ ಸಾಗಿಸಲಾಯಿತು. ಸ್ವಚ್ಛತಾ ಕಾರ್ಯಕ್ರಮ ಮುನ್ನ ಪುಲ್ವಾಮಾ ದಾಳಿಯಲ್ಲಿ ಬಲಿದಾನ ನೀಡಿದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು.
ರೋಟರಿ ಕಾರ್ಯದರ್ಶಿ ಮಂಜುನಾಥ್ ಸಹಾಯಕ ರಾಜ್ಯಪಾಲರಾದ ಉಲ್ಲಾಸ್ ಕೃಷ್ಣ, ಎಸ್ ಕೆ ಸತೀಶ್ ಡಾ ಹರಿ ಎ ಶೆಟ್ಟಿ ಮತ್ತು ರೋಟರಿ ಸದಸ್ಯರು ಭಾರತ ಮಾತಾ ಕಾಲೇಜಿನ ಪ್ರಾಂಶುಪಾಲ ಫಾ ಅಭಿನ್, ಫಾ ಟಿಟ್ಟೋ ಥಾಮಸ್, ಎನ್ಎಸ್ಎಸ್ ಶಿಬಿರ ಅಧಿಕಾರಿ ದಿನೇಶ್ ಕುಮಾರ್, ಅಭಿಷೇಕ್, ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ಚೈತನ್ಯ, ಕಾವ್ಯ ಗೌಡ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ವನಿತಾ ಚಂದ್ರಮೋಹನ್, ಧರಣಿ ಸೋಮಯ್ಯ, ಕೆ ಪಿ ನಾಗರಾಜ್ ಮತ್ತಿತರರು ಇದ್ದರು.