ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಸುದೀರ್ಘ 50 ವರ್ಷಗಳ ಯಶಸ್ವಿ ರಾಜಕಾರಣ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮೇ 9 ರಂದು ಹಮ್ಮಿಕೊಂಡಿರುವ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಬಳ್ಳಾರಿ ಜಿಲ್ಲೆಯಿಂದ 25 ಸಾವಿರ ಜನ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರು ತೆರಳಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ತಿಳಿಸಿದರು.ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಬಂಧು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಧೀಮಂತ ನಾಯಕ ಎನಿಸಿದ ಯಡಿಯೂರಪ್ಪ ಈ ನಾಡು ಕಂಡ ಅತ್ಯಂತ ಶ್ರೇಷ್ಠ ಜನನಾಯಕರಾಗಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಮುಂಚೂಣಿ ವಹಿಸಿದ್ದ ಅವರು ರಾಜ್ಯದಾದ್ಯಂತ ಓಡಾಡಿ ಪಕ್ಷವನ್ನು ಬುಡಮಟ್ಟದಿಂದ ಗಟ್ಟಿಗೊಳಿಸಿದವರು. ಅವರ ನಿರಂತರ ಅವಿರತ ಶ್ರಮದಿಂದಾಗಿಯೇ ಕರ್ನಾಟಕದಲ್ಲಿ ಬಿಜೆಪಿಯ ಕಮಲ ಅರಳಲು ಸಾಧ್ಯವಾಯತು. ಪಕ್ಷಕ್ಕೆ ಹಾಗೂ ನಾಡಿಗೆ ಅಪೂರ್ವವಾದ ಕೊಡುಗೆ ನೀಡಿರುವ ಬಿ.ಎಸ್. ಯಡಿಯೂರಪ್ಪ ರಾಜಕಾರಣಕ್ಕೆ ಆಗಮಿಸಿ ಸುದೀರ್ಘ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರೇ ಹಮ್ಮಿಕೊಂಡಿರುವ ಬಿಎಸ್‌ವೈ ಅಭಿಮಾನೋತ್ಸವಕ್ಕೆ ದೇಶದ ನಾನಾ ಕಡೆಗಳಿಂದ ಪಕ್ಷದ ಸಹಸ್ರಾರು ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಸುಮಾರು 7 ರಿಂದ 8 ಲಕ್ಷ ಜನರು ಕಾರ್ಯಕ್ರಮಕ್ಕೆ ಜಮಾಯಿಸುವ ಸಾಧ್ಯತೆಯಿದೆ. ಹೀಗಾಗಿ ಬಳ್ಳಾರಿ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರದುರ್ಗಕ್ಕೆ ತೆರಳುತ್ತಿದ್ದಾರೆ. ಈಗಾಗಲೇ ಸಭೆಗಳನ್ನು ಮಾಡಿಕೊಂಡು ಚಿತ್ರದುರ್ಗಕ್ಕೆ ಹೋಗುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಪ್ರಮುಖರಾದ ಮುರಹರಗೌಡ ಗೋನಾಳ್, ಗುತ್ತಿಗನೂರು ವಿರುಪಾಕ್ಷಗೌಡ, ಶಂಕ್ರಪ್ಪ, ಅಡವಿಸ್ವಾಮಿ, ಶಂಕ್ರಪ್ಪ, ರಾಮಾಂಜಿನಿ, ಮಲ್ಲೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.