ಶಿವಕುಮಾರ ಕುಷ್ಟಗಿ
ಪಂಚಾಯತ್ ರಾಜ್ ಕಾಯ್ದೆ ಸೆಕ್ಷನ್ 3/ಇ ಪ್ರಕಾರ, ಗ್ರಾಮಗಳ ರಸ್ತೆ, ಕುಡಿಯುವ ನೀರು, ಅಂಗನವಾಡಿ, ಕೃಷಿ ರಸ್ತೆಗಳು ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಾರ್ಡ್ ಸಭೆ ಮತ್ತು ಗ್ರಾಮಸಭೆಗಳಲ್ಲೇ ಯೋಜನೆ ಸಿದ್ಧವಾಗಬೇಕು. ಕಾಯ್ದೆಯ ಸೆಕ್ಷನ್ 309 ಮತ್ತು 310ರ ಅಡಿ ಈ ಯೋಜನೆಗಳಿಗೆ ರಾಜ್ಯ ಹಣಕಾಸು ಇಲಾಖೆ ಕಾನೂನುಬದ್ಧವಾಗಿ ಅನುದಾನ ನೀಡಬೇಕು. ಇದು ಗ್ರಾಮಗಳ ಹಕ್ಕು ಕೂಡಾ ಎಂದು ಪರಿಗಣಿಸಲಾಗುತ್ತದೆ.
ಆದರೆ, ಕೇವಲ ಗದಗ ಜಿಲ್ಲೆಯೊಂದರಲ್ಲೇ ಗ್ರಾಪಂಗಳಿಂದ ಜಿಲ್ಲಾ ಯೋಜನಾ ಸಮಿತಿಗೆ ಸಲ್ಲಿಕೆಯಾಗಿದ್ದ 5 ಲಕ್ಷಕ್ಕೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳ ಒಟ್ಟು ಪ್ರಸ್ತಾವನೆ ಮೊತ್ತ ₹5175 ಕೋಟಿ. ಈ ಪೈಕಿ ಗದಗ ಜಿಪಂ ಬಳಿ ಇದ್ದದ್ದು ₹2631 ಕೋಟಿ ಮಾತ್ರ. ಇನ್ನುಳಿದ ಕೊರತೆಯ ₹2544 ಕೋಟಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ರಾಜ್ಯ ಹಣಕಾಸು ಇಲಾಖೆ ನಿರಾಕರಿಸಿದ್ದು, ಬಜೆಟ್‌ನಲ್ಲಿ ಹಣವಿಟ್ಟಿಲ್ಲ ಎಂಬ ಸಬೂಬು ನೀಡಿ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.ಹಿನ್ನಡೆಗೆ ಕಾರಣವೇನು?: ಈ ಅನುದಾನ ತಡೆಹಿಡಿಯಲು ಕೇವಲ ಹಣಕಾಸಿನ ಕೊರತೆ ಕಾರಣವಲ್ಲ, ಇದರ ಹಿಂದೆ ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳ ವ್ಯವಸ್ಥಿತ ಅಧಿಕಾರ, ರಾಜಕಾರಣ ಅಡಗಿದೆ. ಯೋಜನಾ ಸಮಿತಿಯ ಮೂಲಕ ನೇರವಾಗಿ ಗ್ರಾಪಂಗಳಿಗೆ ಸಾವಿರಾರು ಕೋಟಿ ಅನುದಾನ ಬಿಡುಗಡೆಯಾದರೆ, ಅದರಲ್ಲಿ ಸ್ಥಳೀಯ ಶಾಸಕರ ಹಸ್ತಕ್ಷೇಪ ಇರುವುದಿಲ್ಲ. ಗ್ರಾಮಸ್ಥರೇ ತಮಗೆ ಬೇಕಾದ ಕೆಲಸ ಮಾಡಿಕೊಳ್ಳುತ್ತಾರೆ. ಇದರಿಂದ ತಮಗೆ ಸಿಗಬೇಕಾದ ಎಲ್ಲವೂ ಕೈತಪ್ಪಿ ಹೋಗುತ್ತದೆ ಎಂಬ ಭೀತಿ ಶಾಸಕರನ್ನು ಕಾಡುತ್ತಿದೆ. ತಮ್ಮ ಹಿಂಬಾಲಕರು ಮತ್ತು ಕಾರ್ಯಕರ್ತರಿಗೆ ಕಾಮಗಾರಿಗಳ ಗುತ್ತಿಗೆ ಕೊಡಿಸಲು ಸಾಧ್ಯವಾಗುವುದಿಲ್ಲ ಎಂಬ ಸ್ವಾರ್ಥದಿಂದಾಗಿ ಜನಪ್ರತಿನಿಧಿಗಳು, ವಿಕೇಂದ್ರೀಕರಣ ವ್ಯವಸ್ಥೆಯನ್ನೇ ಮುಳುಗಿಸಲು ಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳು ಗ್ರಾಪಂ ಮಾಜಿ ಹಿರಿಯ ಸದಸ್ಯರಿಂದ ಕೇಳಿ ಬರುತ್ತಿದೆ.
ಹಂಚಿಕೆ ನಿರೀಕ್ಷೆ: 2026- 27ನೇ ಸಾಲಿನ ಅಭಿವೃದ್ಧಿ ಯೋಜನೆಗಳ ಪಟ್ಟಿ ತಯಾರಿಸುವಲ್ಲಿ ಗದಗ ಜಿಲ್ಲೆ ಮೊದಲನೇ ಸ್ಥಾನದಲ್ಲಿ ಇತ್ತು. ಆದರೆ, ಇತರ ಜಿಲ್ಲೆಗಳಿಂದ ಆಗಿರುವ ವಿಳಂಬ, ತರಾತುರಿಯ ಸಿದ್ಧತೆಯಿಂದಾಗಿ ಯಾವ ಜಿಲ್ಲೆಗಳಿಗೂ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಆಗಲಿಲ್ಲ. ಈ ಬಾರಿ ಅನುದಾನ ಹಂಚಿಕೆ ಆಗಬಹುದು ಎಂಬ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದರು.