ಮಕ್ಕಳ ಹಕ್ಕುಗಳ ಆಯೋಗದ ನೇಮಕಾತಿ ಹಿಂಪಡೆಯಲು ಆಗ್ರಹ

KannadaprabhaNewsNetwork |  
Published : Jun 15, 2026, 03:15 AM IST
ಮಕ್ಕಳ ಹಕ್ಕುಗಳಿಗಾಗಿ ಪ್ರಗತಿಪರ ಒಕ್ಕೂಟಗಳ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಅರ್ಹತೆ ಇಲ್ಲದ ವ್ಯಕ್ತಿಗಳನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಾಗಿ ನೇಮಿಸಿರುವ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ ಹಾಗೂ ಕಾನೂನಿನ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ನೇಮಿಸುವಂತೆ ಒತ್ತಾಯಿಸಿ ಮಕ್ಕಳ ಹಕ್ಕುಗಳಿಗಾಗಿ ಪ್ರಗತಿಪರ ಒಕ್ಕೂಟಗಳ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಹಾವೇರಿ: ಅರ್ಹತೆ ಇಲ್ಲದ ವ್ಯಕ್ತಿಗಳನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಾಗಿ ನೇಮಿಸಿರುವ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ ಹಾಗೂ ಕಾನೂನಿನ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ನೇಮಿಸುವಂತೆ ಒತ್ತಾಯಿಸಿ ಮಕ್ಕಳ ಹಕ್ಕುಗಳಿಗಾಗಿ ಪ್ರಗತಿಪರ ಒಕ್ಕೂಟಗಳ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಕಾಯ್ದೆ, 2005 ಅಡಿಯಲ್ಲಿ ಸ್ಥಾಪಿಸಲಾದ ಕಾನೂನುಬದ್ಧ ಸಂಸ್ಥೆಯಾಗಿದೆ. ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಗೆ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ಪ್ರಕಾರ ಮೇ 27ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ನೇಮಕಗೊಂಡಿರುವ ಕೆಲವು ವ್ಯಕ್ತಿಗಳು ನಿಗದಿತ ಅರ್ಹತಾ ಮಾನದಂಡಗಳನ್ನು ಹೊಂದಿಲ್ಲವೆಂದು ಕಂಡುಬರುತ್ತಿದೆ. ಈ ಅಧಿಸೂಚನೆಯ ಪ್ರಕಾರ ಕಲಬುರಗಿ ಜಿಲ್ಲೆಯ ಆದರ್ಶ ನಗರ ನಿವಾಸಿ ಸಂತೋಷ ಕುಮಾರ್ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ. ಲಭ್ಯ ಮಾಹಿತಿಯ ಪ್ರಕಾರ ಅವರು ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿರುವ ಸೇವಾ ಪೂರೈಕೆದಾರರಾಗಿದ್ದು, ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಯಾವುದೇ ಗಮನಾರ್ಹ ಕಾರ್ಯ ನಿರ್ವಹಿಸಿರುವ ಮಾಹಿತಿ ಇಲ್ಲ. ಸದಸ್ಯರಾಗಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸತ್ಯನಾರಾಯಣ ಶೆಟ್ಟಿ, ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಜಗನ್ನಾಥ ಹಲಮಡಗಿ ಅವರನ್ನು ನೇಮಿಸಿರುವುದಾಗಿ ತಿಳಿದುಬಂದಿದೆ. ಆದರೆ, ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಅವರು ಕಾರ್ಯನಿರ್ವಹಿಸಿರುವ ಬಗ್ಗೆ ಯಾವುದೇ ಸಾರ್ವಜನಿಕ ದಾಖಲೆ ಲಭ್ಯವಿಲ್ಲ. ಹೀಗಾಗಿ ಈ ನೇಮಕಾತಿ ಅಧಿಸೂಚನೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಕಾನೂನಿನ ಪ್ರಕಾರ ಅರ್ಹ, ಸಮರ್ಥ ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಅನುಭವ ಹೊಂದಿರುವ ವ್ಯಕ್ತಿಗಳನ್ನು ನೇಮಿಸಬೇಕು. ಆಯ್ಕೆ ಪ್ರಕ್ರಿಯೆಯ ಕುರಿತು ಸ್ವತಂತ್ರ, ನ್ಯಾಯಸಮ್ಮತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಸಂಬಂಧಿತ ಅಧಿಕಾರಿಗಳ ಪಾತ್ರವನ್ನು ತನಿಖೆ ಪೂರ್ಣಗೊಳ್ಳುವವರೆಗೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ವೇಳೆ ಪ್ರಮುಖರಾದ ಬಸವರಾಜ ಪೂಜಾರ, ಉಡಚಪ್ಪ ಮಾಳಗಿ, ಎಸ್.ಡಿ.ಬಳಿಗಾರ, ಮಂಜುನಾಥ ಕಸವನಹಳ್ಳಿ, ಖಲಂದರ ಅಲ್ಲಿಗೌಡ್ರ, ಹಸೀನಾ ಹೆಡಿಯಾಲ, ಶೆಟ್ಟಿ ವಿಭೂತಿ, ಗುತ್ತೆಮ್ಮ ಸುಣಗಾರ, ದಾದಾಫೀರ್ ತಿಳುವಳ್ಳಿ, ತರನಮ್ ಖತೀಬ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೂದಗಟ್ಟಿಯಲ್ಲಿ ೩೩ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ
ಎಚ್. ಕೆ. ಪಾಟೀಲರಿಗೆ ಮಂತ್ರಿಗಿರಿ ನೀಡದಿದ್ದರೆ ಸಚಿವರ ಕ್ಷೌರಸೇವೆ ಬಹಿಷ್ಕಾರ: ಎಚ್ಚರಿಕೆ