ಹಾನಗಲ್ಲ:ಬದುಕಿನ ಮೂಲ ಸಾರವೇ ವಚನ ಸಾಹಿತ್ಯವಾಗಿದ್ದು, ವಚನಗಳು ಮನೆ ಮನೆಯ ಮಾತಾಗಿ ಸುಸಂಸ್ಕೃತ ಜೀವನಕ್ಕೆ ದಾರಿ ದೀಪವಾಗಿ ಸ್ವೀಕರಿಸಬೇಕು ಎಂದು ಭಾರತೀಯ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಪ್ರಹ್ಲಾದ ಸಾಂಬ್ರಾಣಿ ತಿಳಿಸಿದರು.

ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ತಾಲೂಕು ಘಟಕ ಆಯೋಜಿಸಿದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳೆಂದರರೆ ಮಾನವೀಯ ಮೌಲ್ಯಗಳು. ಇಂದು ಮೌಲ್ಯಗಳು ಕುಸಿದು ಸಾಮಾಜಿಕ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗುತ್ತಿದ್ದು, ಶರಣರು ಅತ್ಯಂತ ಸರಳವಾಗಿ ನೀಡಿದ ವಚನಗಳಲ್ಲಿನ ಮೌಲ್ಯಗಳು ನಮ್ಮ ಮನ ಮನೆ ಬೆಳಗುವ ನಂದಾದೀಪಗಳಾಗಿವೆ. ಕಾಯಕದ ಮೂಲಕವೇ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡ ಶರಣರು ಇಡೀ ಮನುಕುಲಕ್ಕೆ ದುಡಿದುಣ್ಣುವ ನೈತಿಕತೆಯನ್ನು ಬೋಧಿಸಿದರು. ಶರಣರು ಅನುಭಾವದ ಮೂಲಕ ಬದುಕಿನ ಸತ್ಯ ಹೇಳಿದ್ದಾರೆ. ದುಡಿಮೆಯೇ ಭಗವಂತ, ದಾಸೋಹವೆ ಜೀವನದ ತೃಪ್ತಿ ಎಂಬ ಸತ್ಯಗಳು ಎಲ್ಲ ಕಾಲಕ್ಕೂ ಸಲ್ಲುವ ಸಂದೇಶಗಳು ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ನ್ಯಾಯವಾದಿ ಎಂ.ಎಸ್. ಹುಲ್ಲೂರ, ವಚನಗಳು ಮಕ್ಕಳು ಯುವ ಪೀಳಿಗೆಗೆ ತಲುಪುವ ಕೆಲಸವಾಗಬೇಕು. ವಚನಕಾರರು ಸಮಾಜಕ್ಕೆ ಬೋಧನೆಗಾಗಿ ವಚನಗಳನ್ನು ಬರೆದವರಲ್ಲ. ತಮ್ಮ ಜೀವನಾನುಭವನ್ನು ವಚನಗಳಾಗಿ ರಚಿಸಿದರು. ಇಂದು ನ್ಯಾಯಾಲಯಗಳು ನೀಡುವಂತಹ ನ್ಯಾಯ ನಿರ್ಣಯಗಳನ್ನು ಅಂದಿನ ವಚನಕಾರರು ಯಾರಿಗೂ ಅನ್ಯಾಯವಾಗದಂತೆ ನ್ಯಾಯ ನಿರ್ಣಯನೀಡುತ್ತಿದ್ದರು. ಎಲ್ಲರನ್ನೂ ಸಮನಾಗಿ ಕಾಣುವ, ಸಮಾಜಮುಖಿಯಾಗಿ ಬದುಕುವ ನೀತಿ ನಿಯಮಗಳ ಒಟ್ಟು ಮೊತ್ತವೇ ವಚನಗಳು ಎಂದರು.

ಉಪನ್ಯಾಸ ನೀಡಿದ ಕದಳಿ ಮಹಿಳಾ ವೇದಿಕೆ ಪದಾಧಿಕಾರಿ ಸುಜಾತಾ ನಂದಿಶೆಟ್ಟರ, ಅಕ್ಕಮಹಾದೇವಿ ಕೌಶಿಕನ ಲಾಲಸೆಯನ್ನು ತಿರಸ್ಕರಿಸಿ ವೀರ ವಿರಾಗಿಣಿಯಾದದ್ದು ಮಾತ್ರವಲ್ಲ, ಇಡೀ ಮಹಿಳಾ ಸಮಾಜಕ್ಕೆ ತ್ಯಾಗದ ದೊಡ್ಡ ಸಂದೇಶ ನೀಡಿದ್ದಾಳೆ. ಯಾವ ಪುರುಷನಿಗೂ ಸಮನಾಗಿ ನಿಲ್ಲುವ ಶಕ್ತಿ ಇದೆ. ಶರಣ ಸಂಗಮದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿದ ಶ್ರೇಯಸ್ಸು ಬಸವಾದಿ ಶಿವಶರಣರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಅಧ್ಯಕ್ಷ ಸಿ. ಮಂಜುನಾಥ, ಶಿಕ್ಷಕಿ ರೇಣುಕಾ ಕರೆಗೊಂಡರ್, ಸುಮಂಗಲಾ ಕಟ್ಟಿಮಠ, ರೂಪಾ ಸಾಂಬ್ರಾಣಿ, ಪೂರ್ಣಿಮಾ ಶಿವಗಿರಿ ಪಾಲ್ಗೊಂಡಿದ್ದರು, ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಉಪಾಧ್ಯಕ್ಷ ಶಂಭುಲಿಂಗಯ್ಯ ಹೇಮಗಿರಿಮಠ ಆಶಯ ನುಡಿ ನುಡಿದರು. ಉಪಾಧ್ಯಕ್ಷ ಅಶೋಕ ದಾಸರ ಸ್ವಾಗತಿಸಿದರು. ಕಾರ್ಯದರ್ಶಿ ಸುಭಾಸ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಶೀಲಾ ಗಾಣಿಗೇರ ವಂದಿಸಿದರು.