ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಶಾಸಕ

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಮಳೆ ಕೊರತೆಯಿಂದ ಯಾವುದೇ ಗ್ರಾಮೀಣ ಜನತೆ ಗುಳೆ ಹೋಗದಂತೆ ತಡೆಯಲು ಇರುವ ಸ್ಥಳದಲ್ಲೇ ವಿಬಿ-ಜಿ ರಾಮ್‌ಜಿಯಡಿ ಉದ್ಯೋಗ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಜರುಗಿದ ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದರು. ಶಿರಹಟ್ಟಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ತುರ್ತಾಗಿ ವಿಬಿಜಿ-ರಾಮ್‌ಜಿ ಯೋಜನೆಯಡಿ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಗಟ್ಟಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ರೈತರು ಮತ್ತು ಕೃಷಿ ಕಾರ್ಮಿಕರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಕೆಲಸ ದೊರೆಯುವಂತೆ ವಿಬಿಜಿ-ರಾಮ್‌ಜಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಷ್ಟೇ ಜನ ಗ್ರಾಮೀಣ ಭೂರತಹಿತ ಕೂಲಿ ಕಾರ್ಮಿಕರು, ಬಡವರು ಬಂದರು ಕೆಲಸ ನೀಡಿ ಗುಳೆ ತಡೆಯಬೇಕು ಎಂದು ನಿರ್ದೇಶನ ನೀಡಿದರು.


ಕೆಲಸ ಕೊಡುತ್ತಿಲ್ಲ ಎಂಬ ಆರೋಪ ಬಾರದಂತೆ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕೆರೆಗಳ ಅಭಿವೃದ್ಧಿ, ಹೂಳೆತ್ತುವಿಕೆ, ಕಾಲುವೆಗಳ ದುರಸ್ತಿ, ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಗುರುತಿಸಿ ತಕ್ಷಣ ಅನುಷ್ಠಾನಗೊಳಿಸಬೇಕು. ಕೆಲಸ ಕೇಳುವ ಪ್ರತಿಯೊಬ್ಬ ಕೂಲಿ ಕಾರ್ಮಿಕರಿಗೂ ಉದ್ಯೋಗ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.

ಕುಡಿಯುವ ನೀರು:

ತಾಲೂಕಿನ ಜಲ್ಲಿಗೇರಿ, ಜಲ್ಲಿಗೇರಿ ತಾಂಡ ವಡವಿ, ನವೆಬಾವನೂರು, ಮಾಚೇನಹಳ್ಳಿ, ಕುಸಲಾಪುರ, ಶಿವಾಜಿನಗರ, ಮಾಗಡಿ ಮತ್ತು ಚೆನ್ನಪಟ್ಟಣ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಇಇ ಮಲ್ಲಿಕಾರ್ಜುನ ಪಾಟೀಲ, ಈಗಾಗಲೇ ತಾಲೂಕಿನಲ್ಲಿ ಹೊಸ ಬೋರ್‌ವೆಲ್‌ಗಳ ಅಳವಡಿಕೆ ಹಾಗೂ ಹೊಸ ಪೈಪ್ ಲೈನ್ ಮತ್ತು ಈಗಿರುವ ಪೈಪ್ ಲೈನ್‌ಗಳ ದುರಸ್ತಿಗೆ ₹೧೪೦ ಲಕ್ಷಗಳ ಕಾಮಗಾರಿಯ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ ಎಂದರು.

ಮೇವು ಮುಂದಿನ ೧೮ ವಾರಗಳಿಗೆ ಅಗತ್ಯವಿರುವಷ್ಟು ಲಭ್ಯವಿದೆ. ಮುಂದಿನ ಬೇಸಿಗೆ ಕಾಲಕ್ಕೆ ತೊಂದರೆಯಾಗದಂತೆ ಜಾನುವಾರುಗಳಿಗೆ ಅಗತ್ಯ ಇರುವ ಮೇವನ್ನು ನದಿ ತೀರದ ದೊಡ್ಡ ರೈತರ ಸಹಕಾರ ಪಡೆದು ದಾಸ್ತಾನು ಮಾಡಲು ಕ್ರಮವಹಿಸಲಾಗಿದೆ. ತಾಲೂಕಿನಲ್ಲಿ ಒಟ್ಟು ೪೬.೭೩೫ ಹೆಕ್ಟೇರ್ ಸಾಗುವಳಿಗೆ ಯೋಗ್ಯವಾದ ಭೂಪ್ರದೇಶವಿದೆ. ಆದರೆ ಮಳೆಯ ಕೊರತೆಯಿಂದ ಕೇವಲ ೩೮೫೫ ಹೆಕ್ಟೇರ್ ಕೃಷಿ ಜಮೀನು ಮತ್ತು ತೋಟಗಾರಿಕೆ ಬೆಳೆಯ ೫೮ ಹೆಕ್ಟೇರ್ ಮಾತ್ರ ಬಿತ್ತನೆ ಆಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ತಹಸೀಲ್ದಾರ ಕೆ. ರಾಘವೇಂದ್ರ ರಾವು, ತಾಪಂ ಕಾರ್ಯಾಲಯದ ಹನುಮೇಶ ಕೊಂಡಿಕೊಪ್ಪ ಸೇರಿ ಇತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.