ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಬೀದರ್ ಜಿಲ್ಲೆಯಲ್ಲಿ 20 ಲಕ್ಷ ಮಾನವ ದಿನ ಸೃಜಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 150ರಷ್ಟು ಹೆಚ್ಚಳವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಬೀದರ್
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಬೀದರ್ ಜಿಲ್ಲೆಯಲ್ಲಿ 20 ಲಕ್ಷ ಮಾನವ ದಿನ ಸೃಜಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 150ರಷ್ಟು ಹೆಚ್ಚಳವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವರ್ಷ ಇದೇ ಅವಧಿಯಲ್ಲಿ ಮನ್ರೆಗಾ ಅಡಿಯಲ್ಲಿ 7 ಲಕ್ಷ ಮಾನವ ದಿನ ಸೃಷ್ಟಿ ಮಾಡಲಾಗಿತ್ತು. ಆದರೆ ಈ ವರ್ಷ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ 13 ಲಕ್ಷ ಮಾನವ ದಿನಗಳು ಹೆಚ್ಚಳವಾಗಿವೆ ಎಂದರು.
ಮಳೆ ಕೊರತೆಯಿಂದ ಬರಪರಿಸ್ಥಿತಿ ತಲೆದೋರಿದ್ದು, ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ಹೋಗುತ್ತಿದ್ದ ಗ್ರಾಮೀಣ ಬಡಜನರು, ಮಹಿಳೆಯರು, ದುರ್ಬಲರು, ವಂಚಿತರು, ಭೂರಹಿತ ಕೂಲಿ ಕಾರ್ಮಿಕರಿಗೆ ಇರುವ ಸ್ಥಳದಲ್ಲಿಯೇ ಉದ್ಯೋಗ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಈವರೆಗೆ ರಾಜ್ಯದಲ್ಲಿ 1.75 ಕೋಟಿ ಮಾನವ ದಿನ ಸೃಜನೆ ಮಾಡಲಾಗಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಗುಳೆ ಹೋಗದಂತೆ ತಡೆಯಲು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಕೇಂದ್ರ ಸರ್ಕಾರದ ನೆರವಿನ ಪ್ರಮಾಣದಲ್ಲಿ ಭಾರಿ ಕಡಿತವಾಗಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗುತ್ತಿದ್ದಾಗ್ಯೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ ಎಂದರು.
ವಿಬಿಜಿ ರಾಮ್ ಜಿ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ವರ್ಷದಲ್ಲಿ 125 ದಿನ ಉದ್ಯೋಗ ನೀಡಲು ಅವಕಾಶವಿದ್ದು, ಹೆಣ್ಣು, ಗಂಡು ಎಂಬ ತಾರತಮ್ಯವಿಲ್ಲದೆ 382 ರು. ಕೂಲಿ ನೀಡಲಾಗುತ್ತಿದೆ. ಹೀಗಾಗಿ ಪ್ರತಿ ಗ್ರಾಮೀಣ ಕುಟುಂಬಗಳು ವಾರ್ಷಿಕ 47,750 ರು. ಗಳಿಸಬಹುದಾಗಿದೆ ಎಂದು ವಿವರಿಸಿದರು.
ಅಂತರ್ಜಲ ಮಟ್ಟ ಹೆಚ್ಚಿಸಲು ಕೊಳವೆ ಬಾವಿ ಮರುಪೂರಣಕ್ಕೂ ಅವಕಾಶ: ಅಂತರ್ಜಲ ಮಟ್ಟ ದೇಶಾದ್ಯಂತ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಿಸಲು ವೈಯಕ್ತಿಕ ಕೊಳವೆ ಬಾವಿಗಳಿಗೂ ಮರುಪೂರಣ (ರೀಚಾರ್ಜ್ ಪಿಟ್) ಮಾಡಿಸಲು ವಿಬಿಜಿ ರಾಮ್ ಜಿ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ದನದ ಕೊಟ್ಟಿಗೆ, ಕುರಿ, ಮೇಕೆ ಕೊಟ್ಟಿಗೆ, ಚೆಕ್ ಡ್ಯಾಂ, ಶಾಲಾ ಕೊಠಡಿ, ಅಂಗನವಾಡಿ ನಿರ್ಮಾಣಕ್ಕೂ ಅವಕಾಶವಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆಸ್ತಿ ಸೃಜನೆ ಮಾಡಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. 382ರೂ. ಹಣ ಪಡೆದು, ಶ್ರಮದಾನ ಮಾಡಿದರೆ ಗ್ರಾಮೀಣ ವಿಕಾಸ ಆಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಹೊಸದಾಗಿ ಜಾಬ್ ಕಾರ್ಡ್ ವಿತರಣೆ: ಹಲವರ ಜಾಬ್ ಕಾರ್ಡ್ ನಿಷ್ಟ್ಕೀಯವಾಗಿತ್ತು. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಬರ ಪರಿಸ್ಥಿತಿಯ ಕಾಲದಲ್ಲಿ ಉದ್ಯೋಗ ಒದಗಿಸಲು ಜಾಬ್ ಕಾರ್ಡ್ ಮೇಳ ನಡೆಸಲು ಸೂಚಿಸಿದ ಪರಿಣಾಮ ಬೀದರ್ ಜಿಲ್ಲೆಯೊಂದರಲ್ಲಿಯೇ 26 ಸಾವಿರ ಕುಟುಂಬಗಳು ಹೊಸದಾಗಿ ಜಾಬ್ ಕಾರ್ಡ್ ಮಾಡಿಸಿಕೊಂಡಿವೆ ಎಂದು ತಿಳಿಸಿದರು.
ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ. ಬೀದರ್ ಜಿಲ್ಲೆಗೆ ಕುಡಿಯುವ ನೀರಿಗಾಗಿ 10 ಕೋಟಿ ರು. ಮಂಜೂರು ಮಾಡಲಾಗಿದೆ. ಬರುವ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಈಗಿನಿಂದಲೇ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.