26 ಸಾವಿರ ಯುವ ಮತದಾರರು ನೋಂದಣಿ

KannadaprabhaNewsNetwork |  
Published : Apr 20, 2024, 01:02 AM IST
ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಯಿತು.  | Kannada Prabha

ಸಾರಾಂಶ

18 ವರ್ಷ ಪೂರ್ಣಗೊಂಡ ಅರ್ಹ ಮತದಾರರೆಲ್ಲರೂ ಮತದಾನ ಮಾಡುವುದು ಅತಿ ಮುಖ್ಯ

ಗದಗ: ಜಿಲ್ಲಾಡಳಿತ, ಜಿಪಂ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ಮತದಾನದ ಮಹತ್ವ ಕುರಿತು ಯುವ ಮತದಾರರಿಂದ ಮಾನವ ಸರಪಳಿ ಕಾರ್ಯಕ್ರಮವು ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಿತು.

ನಗರದ ವಿವಿಧ ಕಾಲೇಜಿನ ನೂರಾರು ಯುವ ಮತದಾರರು ಮಾನವ ಸರಪಳಿ ಪಾಲ್ಗೊಂಡು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಈ ಬಾರಿ ಜಿಲ್ಲೆಯಲ್ಲಿ ಹೊಸದಾಗಿ 26 ಸಾವಿರ ಮಂದಿ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿರುವುದು ವಿಶೇಷ ಎಂದು ತಿಳಿಸಿದರು.

18 ವರ್ಷ ಪೂರ್ಣಗೊಂಡ ಅರ್ಹ ಮತದಾರರೆಲ್ಲರೂ ಮತದಾನ ಮಾಡುವುದು ಅತಿ ಮುಖ್ಯವಾಗಿದೆ.ಪ್ರತಿ ಮತವೂ ಅಮೂಲ್ಯವಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆ 1950 ಅಥವಾ ಸಿವಿಜಲ್ ಆಪ್ ಮೂಲಕ ದೂರು ದಾಖಲಿಸಬಹುದಾಗಿದೆ ಜತೆಗೆ ಚುನಾವಣೆಗೆ ಸಂಬಂಧಿಸಿದ ಮಾಹಿತಿ ನೀಡಬಹುದಾಗಿದೆ. ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಯುವ ಮತದಾರರ ಪಾತ್ರ ಹೆಚ್ಚಿನದಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಪ್ರಜಾಪ್ರಭುತ್ವ ಬಲಪಡಿಸಲು ಸಾಧ್ಯ ಎಂದರು.

ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆ ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ,ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆಂದು ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಪಂ ಸಿಇಒ ಎಸ್.ಭರತ್ ಮಾತನಾಡಿ, ಮೇ 7 ರಂದು ನಡೆಯುವ ಮತದಾನದಂದು ಅರ್ಹರೆಲ್ಲರೂ ಮತ ಚಲಾಯಿಸಬೇಕು. ಅರ್ಹರು ಮತದಾನದಿಂದ ವಂಚಿತರಾಗಬಾರದು. ಚುನಾವಣಾ ಪ್ರಕ್ರಿಯೆಯಲ್ಲಿ ಯುವಜನರು ಸಡಗರ-ಸಂಭ್ರಮದಿಂದ ಮತ ಹಕ್ಕು ಚಲಾಯಿಸಬೇಕು. ಪ್ರತಿಯೊಂದು ಮತವೂ ಸಹ ಅತ್ಯಮೂಲ್ಯವಾಗಿದ್ದು ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಕೋರಿದರು.

ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ಅಂತಾರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ ಮಾತನಾಡಿ, ಯುವ ಜನರು ಯಾವುದೇ ಆಸೆ-ಆಮಿಷಗಳಿಗೆ ತುತ್ತಾಗದೇ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

ಮತ್ತೊಬ್ಬ ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ಅಂತಾರಾಷ್ಟ್ರೀಯ ಯೋಗಪಟು ಭೀಮಪ್ಪ ಯಮನಪ್ಪ ಕಬಾಡರ ಮಾತನಾಡಿ, ರಾಷ್ಟ್ರದ ಸುಭದ್ರತೆಗೆ ಹಾಗೂ ಆರ್ಥಿಕ ಸಬಲೀಕರಣಕ್ಕೆ ಅರ್ಹರೆಲ್ಲರೂ ಕಡ್ಡಾಯವಾಗಿ ಮತ ಹಕ್ಕು ಚಲಾಯಿಸಬೇಕು. ಆ ನಿಟ್ಟಿನಲ್ಲಿ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಜಿಪಂ ಉಪ ಕಾರ್ಯದರ್ಶಿ ಹಾಗೂ ಸ್ವೀಪ್ ಸಮಿತಿಯ ಜಿಲ್ಲಾ ನೋಡಲ್ ಅಧಿಕಾರಿ ಸಿ.ಬಿ. ದೇವರಮನಿ, ತಾಪಂ ಇಒ ಮಾಣಿಕರಾವ್ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಕಾಲೇಜುಗಳ ಪ್ರಾಂಶುಪಾಲರು ಉಪನ್ಯಾಸಕರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!