ರಾಜ್ಯದಲ್ಲಿ 10 ತಿಂಗಳಲ್ಲಿ 26000 ಬಾಲ ಗರ್ಭಿಣಿಯರು

KannadaprabhaNewsNetwork |  
Published : Jun 07, 2025, 02:16 AM ISTUpdated : Jun 07, 2025, 02:17 AM IST
35465 | Kannada Prabha

ಸಾರಾಂಶ

ಆಟವಾಡಿಕೊಂಡು ಇರಬೇಕಾದ ಮಕ್ಕಳು ಮಕ್ಕಳನ್ನೇ ಆಟವಾಡಿಸುತ್ತಿದ್ದಾರೆ. ರಾಜ್ಯದಲ್ಲಿ ಬಾಲ್ಯವಿವಾಹ ತಡೆಗಟ್ಟುವಲ್ಲಿ ವಿಫಲವಾಗಿರುವ ಪರಿಣಾಮ ಮತ್ತು ಬಾಲಕಿಯರನ್ನು ಸಂಸಾರಕ್ಕೆ ದೂಡುತ್ತಿರುವ ಹೀನ ಕಾರ್ಯ ಮುಂದುವರಿದಿರುವುದಕ್ಕೆ ಇದು ಸಾಕ್ಷಿಯಂತಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

2024 ಏಪ್ರಿಲ್ ತಿಂಗಳಿಂದ 2025 ಫೆಬ್ರುವರಿ ಮಧ್ಯೆ ಕೇವಲ ಹನ್ನೊಂದು ತಿಂಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 26,436 ಬಾಲ ಗರ್ಭಿಣಿಯರಾಗಿದ್ದಾರೆ. ಇದು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ.

ಆಟವಾಡಿಕೊಂಡು ಇರಬೇಕಾದ ಮಕ್ಕಳು ಮಕ್ಕಳನ್ನೇ ಆಟವಾಡಿಸುತ್ತಿದ್ದಾರೆ. ರಾಜ್ಯದಲ್ಲಿ ಬಾಲ್ಯವಿವಾಹ ತಡೆಗಟ್ಟುವಲ್ಲಿ ವಿಫಲವಾಗಿರುವ ಪರಿಣಾಮ ಮತ್ತು ಬಾಲಕಿಯರನ್ನು ಸಂಸಾರಕ್ಕೆ ದೂಡುತ್ತಿರುವ ಹೀನ ಕಾರ್ಯ ಮುಂದುವರಿದಿರುವುದಕ್ಕೆ ಇದು ಸಾಕ್ಷಿಯಂತಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಇಲಾಖೆ (ಆರ್‌ಸಿಎಚ್ ) ನೀಡಿರುವ ಮಾಹಿತಿ ಇದಾಗಿದೆ.

ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಬಾಲ್ಯವಿವಾಹ ತಡೆಯಲು ಹತ್ತು ಹಲವು ಕಾರ್ಯಕ್ರಮ ಹಾಕಿಕೊಂಡಿದೆ. ಪೋಕ್ಸೋ ಕಾಯ್ದೆಯನ್ನು ಕಟ್ಟಾಗಿನಿಟ್ಟಾಗಿ ಜಾರಿ ಮಾಡುತ್ತಿದೆ. ಅಷ್ಟೇ ಅಲ್ಲ, ಬಾಲ್ಯವಿವಾಹ ತಡೆಯುವ ದಿಸೆಯಲ್ಲಿ ಜಿಲ್ಲಾಧಿಕಾರಿ ಹಂತದಲ್ಲಿಯೇ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸುತ್ತಿದೆ. ಆದರೂ ರಾಜ್ಯದಲ್ಲಿ ಬಾಲ್ಯವಿವಾಹ ನಿಂತಿಲ್ಲ ಎನ್ನುವುದಕ್ಕೆ 18 ವರ್ಷ ತುಂಬುವ ಪೂರ್ವದಲ್ಲಿ ಇಷ್ಟೊಂದು ಬಾಲಕಿಯರು ಗರ್ಭಿಣಿಯರಾಗಿರುವುದೇ ಸಾಕ್ಷಿಯಾಗಿದೆ.

ಸಮಸ್ಯೆಗೆ ಕಾರಣ:

ಬಾಲ ಗರ್ಭಿಣಿ ಮತ್ತು ಬಾಲ್ಯ ವಿವಾಹ ಅನೇಕ ಸಾಮಾಜಿಕ ಸಮಸ್ಯೆಗೆ ಕಾರಣವಾಗುತ್ತದೆ. ಶಿಶು ಮರಣ, ತಾಯಿ ಮರಣ ಪ್ರಮಾಣ ಹೆಚ್ಚಳಕ್ಕೂ ಕಾರಣವಾಗಿದೆ. ಬಾಲಕಿಯರಿರುವಾಗಲೇ ಗರ್ಭ ಧರಿಸುವುದರಿಂದ ಮಾನಸಿಕ ಖಿನ್ನತೆಗೂ ಒಳಗಾಗುತ್ತಾರೆ. ಮಕ್ಕಳು ಆರೋಗ್ಯಪೂರ್ಣವಾಗಿ ಜನಿಸುವುದಿಲ್ಲ. ತೂಕ ಕಡಿಮೆ, ಬುದ್ಧಿಮಾಂದ್ಯ ಸೇರಿದಂತೆ ಮೊದಲಾದ ಸಮಸ್ಯೆಯಿಂದ ಮಕ್ಕಳು ಬಳಲುತ್ತಾರೆ ಎನ್ನುತ್ತಾರೆ ವೈದ್ಯರು.

ಕೇವಲ ಹತ್ತು ತಿಂಗಳಲ್ಲಿಯೇ 26 ಸಾವಿರ ಬಾಲ ಗರ್ಭಿಣಿಯರಾಗಿರುವುದು ದುರಂತವೇ ಸರಿ, ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ.ಬೆಂಗಳೂರಿನಲ್ಲಿಯೇ ಹೆಚ್ಚು ಪ್ರಕರಣ

ಬಾಲ ಗರ್ಭಿಣಯರ ಪ್ರಕರಣಗಳು ಬೆಂಗಳೂರು ನಗರದಲ್ಲಿಯೇ ಹೆಚ್ಚು ಎನ್ನುವುದು ಗಮನಾರ್ಹ ಸಂಗತಿ. ಇಡೀ ಆಡಳಿತ ವ್ಯವಸ್ಥೆಯೇ ಅಲ್ಲಿರುತ್ತದೆ. ಆದರೂ ಸಹ ಬೆಂಗಳೂರು ನಗರವೊಂದರಲ್ಲಿಯೇ 2762 ಬಾಲ ಗರ್ಭಿಣಿಯರು ಇದ್ದಾರೆ. ಅತೀ ಕಡಿಮೆ ಇರುವುದು ಉಡುಪಿ ಜಿಲ್ಲೆಯಲ್ಲಿ. ಕೇವಲ 72 ಪ್ರಕರಣ ಇಲ್ಲಿ ಬೆಳಕಿಗೆ ಬಂದಿವೆ.

ಯಾವ ಜಿಲ್ಲೆಯಲ್ಲೆಷ್ಟು

ಬಾಗಲಕೋಟಿ 889, ಬಳ್ಳಾರಿ 850, ಬೆಳಗಾವಿ 2622, ಬೆಂಗಳೂರು ಗ್ರಾಮೀಣ 376, ಬೆಂಗಳೂರು ನಗರ 2723, ಬೀದರ 851, ಚಾಮರಾಜನಗರ 361, ಚಿಕ್ಕಬಳ್ಳಾಪುರ 655, ಚಿಕ್ಕಮಂಗಳೂರು 447, ಚಿತ್ರದುರ್ಗ 1037, ದಕ್ಷಿಣ ಕನ್ನಡ 187, ದಾವಣಗೇರಿ 518, ಧಾರವಾಡ 576, ಗದಗ 370, ಹಾಸನ 949, ಹಾವೇರಿ 620, ಕಲಬುರಗಿ 822, ಕೊಡಗು 365, ಕೋಲಾರ 727, ಕೊಪ್ಪಳ 617, ಮಂಡ್ಯ 803, ಮೈಸೂರು 1357, ರಾಯಚೂರು 1648, ರಾಮನಗರ 493, ಶಿವಮೊಗ್ಗ 559, ತುಮಕೂರು 1563, ಉಡುಪಿ 72, ಉತ್ತರ ಕನ್ನಡ 220, ವಿಜಯನಗರ 401, ವಿಜಯಪುರ 1919, ಯಾದಗಿರಿ 839.ಕೇವಲ ಹತ್ತು ತಿಂಗಳಲ್ಲಿಯೇ 26 ಸಾವಿರಕ್ಕೂ ಅಧಿಕ ಬಾಲ ಗರ್ಭಿಣಿಯರಾಗಿದ್ದಾರೆ ಎನ್ನುವ ವರದಿಯನ್ನು ಆರೋಗ್ಯ ಇಲಾಖೆಯೇ ನೀಡಿದ್ದು, ವಾಸ್ತವದಲ್ಲಿ ಇದರ ಪ್ರಮಾಣ ಅಧಿಕವಾಗಿದೆ. ಹೀಗಾಗಿ, ಇದನ್ನು ಕಟ್ಟುನಿಟ್ಟಾಗಿ ತಡೆಯುವ ಅಗತ್ಯವಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ