ನಗರದಲ್ಲಿ ಶನಿವಾರವೂ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, 64 ಕಿ.ಮೀ ಫುಟ್‌ಪಾತ್ ಒತ್ತುವರಿ ಮುಕ್ತಗೊಳಿಸಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 264 ಕಿ.ಮೀ ಮಾರ್ಗದಲ್ಲಿನ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಜಿಬಿಎ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ನಗರದಲ್ಲಿ ಶನಿವಾರವೂ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, 64 ಕಿ.ಮೀ ಫುಟ್‌ಪಾತ್ ಒತ್ತುವರಿ ಮುಕ್ತಗೊಳಿಸಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 264 ಕಿ.ಮೀ ಮಾರ್ಗದಲ್ಲಿನ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಜಿಬಿಎ ತಿಳಿಸಿದೆ.
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಜೆಸಿಬಿ, ಟ್ರ್ಯಾಕ್ಟರ್, ಟಿಪ್ಪರ್ ಹಾಗೂ ನೂರಾರು ಅಧಿಕಾರಿಗಳು, ಕಾರ್ಮಿಕರು ಈ ಬೃಹತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 16 ಕಿ.ಮೀ, ಪಶ್ಚಿಮದಲ್ಲಿ 13.45 ಕಿ.ಮೀ, ಕೇಂದ್ರ ಪಾಲಿಕೆ 13 ಕಿ.ಮೀ, ದಕ್ಷಿಣ ಪಾಲಿಕೆ 10.93 ಕಿ.ಮೀ ಹಾಗೂ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ 10.3 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯಿತು. ಒಟ್ಟು 178 ಚಿಕ್ಕ ಅಂಗಡಿ, ವಾಣಿಜ್ಯ ಅಂಗಡಿಗಳು, 198 ತಳ್ಳುಗಾಡಿಗಳು, 321 ಶೀಟ್‌ಗಳು, ಕ್ಯಾನೋಪಿಗಳು, 241 ಮೆಟ್ಟಿಲುಗಳು, ರ‍್ಯಾಂಪ್‌ಗಳು, 14 ತಾತ್ಕಾಲಿಕ ಶೆಡ್‌ಗಳು ಹಾಗೂ 325 ಜಾಹೀರಾತು ಫಲಕಗಳನ್ನು ಜಪ್ತಿ ಮಾಡಲಾಗಿದೆ.ಕಾರ್ಯಾಚರಣೆಯ ಅಂಗವಾಗಿ ರಸ್ತೆ ಬದಿಯಲ್ಲಿದ್ದ ಒಟ್ಟು 214.3 ಟನ್ ಕಟ್ಟಡ ಮತ್ತು ಇತರ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. ಕೇಂದ್ರ ಮತ್ತು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕಡೆ ಫುಟ್‌ಪಾತ್ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಬಿಎ ತಿಳಿಸಿದೆ.
ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಬಿ.ವಿ.ಕೆ ಅಯ್ಯಂಗಾರ್ ರಸ್ತೆಯಲ್ಲಿನ 6 ಪೆಟ್ಟಿ ಅಂಗಡಿಗಳ, 5 ತಳ್ಳುವ ಗಾಡಿಗಳು, 40 ಮೇಲ್ಚಾವಣಿಗಳು, 30 ರ‍್ಯಾಂಪ್ಸ್, ಮೆಟ್ಟಿಲುಗಳು, 10 ಜಾಹೀರಾತು ಫಲಕಗಳು, 2 ತಾತ್ಕಾಲಿಕ ಶೆಡ್ ಹಾಗೂ ಮೆಜೆಸ್ಟಿಕ್ ಹತ್ತಿರ ಧನ್ವಂತರಿ ರಸ್ತೆಯ 1.20 ಕಿ ಮೀ ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳಲ್ಲಿ 15 ಪೆಟ್ಟಿ ಅಂಗಡಿಗಳನ್ನು, 4 ತಳ್ಳುವ ಗಾಡಿಗಳು, 10 ಮೇಲ್ಚಾವಣಿ, 25 ಮೆಟ್ಟಿಲುಗಳನ್ನು ತೆರವುಗೊಳಿಸಲಾಗಿದೆ.
ವ್ಯಾಪಾರಿಗಳ ವಿರೋಧ:
ನಗರದ ಅನೇಕ ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳು ವಿರೋಧ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಅನೇಕ ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದೇವು. ಈಗ ಏಕಾಏಕಿ ಒತ್ತುವರಿ ಎಂದು ಹೇಳಿ ಅಂಗಡಿ ಖಾಲಿ ಮಾಡಿಸಿದರೆ ಜೀವನ ಸಾಗಿಸಲು ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.
ಓಪನ್ ಸುದ್ದಿ))(ಕೃಷ್ಣ ಬೈರೇಗೌಡ ಫೋಟೋ ಬಳಸಿ)
₹70 ಕೋಟಿ ವೆಚ್ಚದಲ್ಲಿ
ಫುಟ್ಪಾತ್ ದುರಸ್ತಿ: ಕೃಷ್ಣ ಬೆಂಗಳೂರು: ಪುಟ್‌ಪಾತ್ ಒತ್ತುವರಿ ತೆರವು ಮಾತ್ರವಲ್ಲದೇ, ದುರಸ್ತಿ ಒಳಗೊಂಡಂತೆ ಅಭಿವೃದ್ಧಿ ಕೆಲಸಗಳಿಗಾಗಿ 70 ಕೋಟಿ ರು. ವ್ಯಯಿಸಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಅವರು, ನಗರದ ಜನರ ಸುರಕ್ಷಿತ ಓಡಾಟಕ್ಕೆ ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನು ಬೀದಿ ಬದಿ ವ್ಯಾಪಾರಿಗಳನ್ನು ಕೂಡ ಎಲ್ಲಾ ರಸ್ತೆಗಳಿಂದ ತೆರವುಗೊಳಿಸುವುದಿಲ್ಲ. ನಗರದಲ್ಲಿ ಸುಮಾರು 15,000 ಕಿ.ಮೀ ರಸ್ತೆಗಳಿವೆ. ಅದರಲ್ಲಿ ಶೇ.10ರಿಂದ 15ರಷ್ಟು ರಸ್ತೆಗಳಲ್ಲಿ ಮಾತ್ರ ಒತ್ತುವರಿ ತೆರವು ಮಾಡಲಾಗುತ್ತಿದೆ. ಉಳಿದ ರಸ್ತೆಗಳಲ್ಲಿ ರಸ್ತೆ ಬದಿ ವ್ಯಾಪಾರಿಗಳು ಬದುಕು ಕಟ್ಟಿಕೊಳ್ಳಲು ಸ್ವತಂತ್ರ್ಯರು. ಪಾದಾಚಾರಿಗಳಿಗೆ ಅಪಘಾತ ಆಗುವುದನ್ನು ತಪ್ಪಿಸಲು, ಅಮೂಲ್ಯ ಜೀವಗಳನ್ನು ಉಳಿಸಲು ಈ ಕಾರ್ಯಾಚರಣೆ ಅನಿವಾರ್ಯವಾಗಿದೆ. ಕಳೆದ ಮೂರು ತಿಂಗಳಿಂದ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ನೊಟೀಸ್ ನೀಡಿ ಕಾನೂನು ಪ್ರಕಾರವೇ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ನಿಷ್ಠುರ ಆಗಿದ್ದೇನೆ: ಬೆಂಗಳೂರು ನಗರ, ಜನತೆಯ ಒಳಿತಿಗಾಗಿ ಒತ್ತುವರಿ ತೆರವು ಕಾರ್ಯ ನಡೆದಿದೆ. ಅದಕ್ಕಾಗಿ ನಾನು ಈಗ ನಿಷ್ಠುರನಾಗಿದ್ದೇನೆ. ಕೆಲವು ಜನರ ವಿರೋಧವಿದ್ದರೂ ದೊಡ್ಡ ಸಂಖ್ಯೆಯ ಜನರ ಬೆಂಬಲ ಸಿಗುತ್ತಿದೆ. ಸಣ್ಣ ಪುಟ್ಟ ಬೀದಿ ವ್ಯಾಪಾರಿಗಳು ಮಾತ್ರವಲ್ಲದೆ, ದೊಡ್ಡವರು ಸೇರಿದಂತೆ ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೇ ತೆರವು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.