ಕನ್ನಡಪ್ರಭ ವಾರ್ತೆ ಮಂಡ್ಯ
ಡಿಜಿಟಲ್ ಕ್ಷೇತ್ರದಲ್ಲಿ ಭಾರತ ಪ್ರಗತಿ ಸಾಧಿಸುತ್ತಿದ್ದರೂ ದೇಶದೊಳಗೆ ಇನ್ನೂ 28 ಕೋಟಿ ಜನರು ಅನಕ್ಷರಸ್ಥರಿದ್ದಾರೆ. ಈ ಶೇ.20ರಷ್ಟು ಜನರಿಗೆ ಓದಲು-ಬರೆಯಲು, ಸಹಿ ಮಾಡುವುದಕ್ಕೂ ಬರದಿರುವುದು ಗಮನಾರ್ಹ ಸಂಗತಿ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ವಿಷಾದಿಸಿದರು.ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ನಡೆದ ೧೬ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರಾಷ್ಟ್ರದಲ್ಲಿ ಪ್ರಸ್ತುತ ಶೇ.೮೦ರಷ್ಟು ಜನ ಸುಶಿಕ್ಷಿತರಿದ್ದಾರೆ. ರಾಷ್ಟ್ರದಲ್ಲಿ ಕೇಂದ್ರ ಸರ್ಕಾರ ಯುಪಿಐ ಜಾರಿಗೊಳಿಸಿ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿತ್ತು. ಇದರಿಂದ ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಅದರ ಮೂಲಕವೇ ಹಣ ಪಡೆಯುವುದು, ಪಾವತಿಯಂತಹ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಜೊತೆಗೆ ಕ್ಯೂಆರ್ ಕೋಡ್ ಬಳಸಿ ವ್ಯವಹಾರ ಮಾಡುವಷ್ಟರ ಮಟ್ಟಿಗೆ ತಾಂತ್ರಿಕತೆ ಬೆಳವಣಿಗೆ ಸಾಧಿಸಿದೆ. ಇದಕ್ಕೆಲ್ಲಾ ತಾಂತ್ರಿಕ ಶಿಕ್ಷಣ ಪಡೆದವರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಿಸಿದರು.ಭಾರತದಲ್ಲಿ ೩೬.೦೬ ಕೋಟಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ ೪.೫೦ ಕೋಟಿ ಉನ್ನತ ಶಿಕ್ಷಣದಲ್ಲಿದ್ದರೆ, ೧.೫೦ ಕೋಟಿ ಐಟಿಐ ಕೌಶಲ್ಯ ತರಬೇತಿ ಶಿಕ್ಷಣದಲ್ಲಿದ್ದಾರೆ. ಶೇ. ೯೪ರಷ್ಟು ಮಕ್ಕಳನ್ನು ಶಾಲಾ ಹಂತದಲ್ಲಿ ದಾಖಲಿಸಲಾಗುತ್ತದೆ. ಹೆಚ್ಚು ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದಕ್ಕೆ ಶಿಕ್ಷಣದ ಹಕ್ಕು ಮತ್ತು ಬಿಸಿಯೂಟ ಯೋಜನೆಯೂ ಕಾರಣವಾಗಿದೆ. ೨೦೧೫ರಲ್ಲಿ ಶೇ. ೯೪ರಷ್ಟು ಮಕ್ಕಳು ಕಲಿಯುತ್ತಿದ್ದರು. ಪ್ರಸ್ತುತ ಮಕ್ಕಳ ಕಲಿಕೆ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ೪.೫೦ ಕೋಟಿ ಮಕ್ಕಳು ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯ ಕಲಿಯುತ್ತಿದ್ದಾರೆ. ೨೦೩೫ಕ್ಕೆ ಇದು ಶೇ.೧೦ಕ್ಕೂ ಹೆಚ್ಚು ಮಂದಿ ಕಲಿಯುವಂತಾಗುತ್ತದೆ. ಈಗಿರುವ ಮಕ್ಕಳಿಗೆ ೧೨೦೦ ವಿಶ್ವವಿದ್ಯಾಲಯಗಳಿವೆ. ೪೫ ಸಾವಿರ ಉನ್ನತ ಶಿಕ್ಷಣ ಕಾಲೇಜುಗಳಿವೆ. ಅತಿ ಹೆಚ್ಚು ಮಂದಿ ಯುವಜನರನ್ನು ಹೊಂದಿರುವ ರಾಷ್ಟ್ರವೂ ನಮ್ಮದಾಗಿದೆ. ಯುವಜನರು ಕಲಿಯುವ ವಿದ್ಯೆ ಸಾರ್ಥಕಗೊಳ್ಳುವ ರೀತಿಯಲ್ಲಿ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ತಿಳಿಸಿದರು.ಭಾರತದಲ್ಲಿ ವಿದ್ಯೆಗೆ ಸಿಗುವಷ್ಟು ಮಾನ್ಯತೆ ವಿಶ್ವದ ಬೇರೆಲ್ಲೂ ಕಾಣಲಾಗುವುದಿಲ್ಲ. ದೇಶ ಆಧುನೀಕತೆಯತ್ತ ಸಾಗುತ್ತಿದ್ದರೂ ಪೋಷಕರು ನಮ್ಮ ಮಕ್ಕಳು ಇಂಜಿನಿಯರ್ ಅಥವಾ ವೈದ್ಯರಾಗಬೇಕೆಂಬ ಹಂಬಲದೊಂದಿಗೆ ಮಕ್ಕಳಿಗೆ ವಿದ್ಯೆ ಕಲಿಸುತ್ತಾರೆ. ಮಕ್ಕಳು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ದೊಡ್ಡ ದೊಡ್ಡ ಹುದ್ದೆಗೆ ಹೋಗಬೇಕು. ಆ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿಇಟಿ ಕರ‍್ಯದರ್ಶಿ ಎಸ್.ಎಲ್. ಶಿವಪ್ರಸಾದ್ ಪದವಿ ಪ್ರಮಾಣ ಪತ್ರ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಲ್. ಮುರಳಿಕೃಷ್ಣ, ಉಪ ಪ್ರಾಂಶುಪಾಲ ಡಾ. ವಿನಯ್ ಎಸ್., ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಉಮೇಶ್ ಡಿ.ಆರ್., ಡೀನ್ ಡಾ. ರುದ್ರೇಶಿ ಅಡ್ಡಮಣಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ೧೧ ಮಂದಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು.