ತಾಲೂಕಿನ ಕಡಬ ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮದ 28 ರೈತ ಕುಟುಂಬಗಳಿಗೆ ಭೂಮಿ ನೀಡದೆ ಎಂಟು ವರ್ಷಗಳಿಂದಲೂ ಅರಣ್ಯ ಇಲಾಖೆ ಸತಾಯಿಸುತ್ತಿದೆ ಎಂದು ಆರೋಪಿಸಿ ಉಳುಮೆ ಮಾಡುತ್ತಿರುವಂತಹ ಭಾಗದಲ್ಲಿಯೇ ರೈತರು ಎರಡು ದಿನದಿಂದ ಶಾಮಿಯಾನ ಹಾಕಿ, ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಕಡಬ ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮದ 28 ರೈತ ಕುಟುಂಬಗಳಿಗೆ ಭೂಮಿ ನೀಡದೆ ಎಂಟು ವರ್ಷಗಳಿಂದಲೂ ಅರಣ್ಯ ಇಲಾಖೆ ಸತಾಯಿಸುತ್ತಿದೆ ಎಂದು ಆರೋಪಿಸಿ ಉಳುಮೆ ಮಾಡುತ್ತಿರುವಂತಹ ಭಾಗದಲ್ಲಿಯೇ ರೈತರು ಎರಡು ದಿನದಿಂದ ಶಾಮಿಯಾನ ಹಾಕಿ, ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. 2015ರಲ್ಲಿ ಬಗರ್ ಹುಕುಂ ಅಡಿಯಲ್ಲಿ 28 ಜನರಿಗೆ ಈ ಭೂಮಿಯು ಮಂಜೂರಾಗಿದೆ. ಆದರೆ ಅಂದಿನಿಂದ ಇಂದಿನವರೆಗೆ ಅರಣ್ಯ ಇಲಾಖೆಯಿಂದ ತಕರಾರು ಇದ್ದು ರೈತರು ಇಲ್ಲಿಗೆ ಬರಲು ಬಿಡದೆ ಉಳುಮೆ ಮಾಡಲು ಬಿಡದೆ ಹೆದರಿ ಗದರಿಸಿ ಇಲ್ಲಿಂದ ಓಡಿಸುವ ಪ್ರಯತ್ನ ಪಡುತ್ತಿದ್ದಾರೆ ಎಂದು ರೈತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ತಹಸೀಲ್ದಾರರು ಖುದ್ದು ಸ್ಥಳಕ್ಕೆ ಆಗಮಿಸಿ ಸರ್ಕಾರಿ ಸರ್ವೆಯರ್ ಮೂಲಕವೇ ಅಳತೆ ಮಾಡಿಸಿ ರೈತರಿಗೆ ಭೂಮಿಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ 28 ರೈತರು ಸರ್ಕಾರಕ್ಕೆ ಸಲ್ಲಿಸಬೇಕಾದ ಎಲ್ಲಾ ದಾಖಲಾತಿ ಸಲ್ಲಿಸಿದ್ದಾರೆ. 2018ರಲ್ಲಿ ಭೂಮಿ ಸಹ ಮಂಜೂರಾಗಿದೆ ಆದರೆ ಅಂದಿನಿಂದ ಇಂದಿನವರೆಗೂ ಸಹ ನಮ್ಮ ಭೂಮಿಯಲ್ಲಿ ನಾವು ಉಳುಮೆ ಮಾಡಲು ಈ ಅರಣ್ಯ ಇಲಾಖೆ ಬಿಟ್ಟಿಲ್ಲ. ಟ್ರ್ಯಾಕ್ಟರ್ ಗಳನ್ನು ತೆಗೆದುಕೊಂಡು ಉಳುಮೆ ಮಾಡಲು ಬಂದಾಗ ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಟ್ರ್ಯಾಕ್ಟರ್ ಗಳನ್ನು ಸಿಜ್ ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಈಗ ಏಕಾಏಕಿ ಅವರೇ ಗುಂಡಿಯನ್ನು ತೋಡಿ ಸಸಿಗಳನ್ನು ಹಾಕುತ್ತಿದ್ದಾರೆ. ಕೇಳಿದರೆ ನೀವು ಇಲ್ಲಿ ಉಳುಮೆ ಮಾಡಿಲ್ಲ ಎಂಬ ಉತ್ತರ ಹೇಳುತ್ತಾರೆ. ಇದರ ಒಳಗೆ ನಮ್ಮನ್ನು ಬಿಟ್ಟಿಲ್ಲ ಎಂದ ಮೇಲೆ ನಾವು ಉಳುಮೆ ಮಾಡುವುದಾದರೂ ಹೇಗೆ ನೀವೇ ಹೇಳಿ ಎಂದು ಪ್ರಶ್ನಿಸಿದರು.
ಸುಮಾರು 45 ವರ್ಷಗಳ ಹಿಂದಿನಿಂದಲೂ ಸಹ ನಮ್ಮ ಹಿರಿಯರು ಇದೇ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬಂದಿದ್ದವರು. ಇಂದು ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನು ಬಿಟ್ಟು ನಾವು ಇಲ್ಲಿಂದ ಹೋಗುವುದಿಲ್ಲ ಈಗಾಗಲೇ ಟ್ರ್ಯಾಕ್ಟರ್ ಗಳನ್ನು ತಂದಿದ್ದೇವೆ ಉಳುಮೆ ಮಾಡಿಯೇ ತೀರುತ್ತೇವೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಪ್ರತಿಭಟನೆಯಲ್ಲಿ ಬಾಬು ಪವನ್ ಜಗದೀಶ್ ಚಂದ್ರಯ್ಯ, ಮಾಲಮ್ಮ ಲಲಿತಮ್ಮ ಉಮೇಶ್ ಪಣೀಂದ್ರ ಮಹಾದೇವಯ್ಯ ಈಶ್ವರಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.
------------------
156 ಸರ್ವೇ ನಂಬರ್ ನಲ್ಲಿ ಸುಮಾರು 231 ಎಕರೆ ಭೂಮಿ ಇದ್ದು ಅದರಲ್ಲಿ 50 ಎಕರೆ ಅರಣ್ಯ ಇಲಾಖೆಗೆ ಸೇರಿದ್ದು, ಮಿಕ್ಕಿದ್ದು ರೈತರಿಗೆ ಸೇರಿದ್ದಾಗಿದ್ದಾಗಿದೆ. ಅವರದು ನಮಗೆ ಬೇಕಿಲ್ಲ ನಮಗೆ ಸರ್ಕಾರ ನೀಡಿರುವ ಭೂಮಿಯನ್ನು ನಮಗೆ ನೀಡಲಿ. ಇಲ್ಲದೆ ಹೋದರೆ ವಿಷ ಕುಡಿದು ಪ್ರಾಣ ಬಿಡುತ್ತೇವೆ ಹೊರತು ಇಲ್ಲಿಂದ ತೆರಳುವುದಿಲ್ಲ. ಅಗತ್ಯವಾದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಮಾಡುತ್ತೇವೆ. - ಪ್ರತಿಭಟನಾ ನಿರತರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.