ಭೀಮಣ್ಣ ಗಜಾಪುರ
ಇಲ್ಲಿಯೇ ಸಂಬಂಧಿಕರ ಜೊತೆ ಉಳಿದುಕೊಂಡಿರುವ ಮಕ್ಕಳಿಗೆ ಅನಾಥಪ್ರಜ್ಞೆ ಕಾಡುತ್ತಿದ್ದು, ವಲಸೆ ಕುಟುಂಬಗಳ ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ.
ಕೂಡ್ಲಿಗಿ ತಾಲೂಕಿನಲ್ಲಿ ಗುಳೇ ಹೋದ ಕುಟುಂಬದ ಮಕ್ಕಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಲಸೆ ಕಾರ್ಡ್ ನೀಡಿ ಕಳುಹಿಸಿದ್ದಾರೆ. ಅವರ ಪೋಷಕರು ಎಲ್ಲಿ ಕೆಲಸ ಮಾಡುತ್ತಾರೋ ಆ ಸ್ಥಳಕ್ಕೆ ಹತ್ತಿರವಿರುವ ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿ ಶಿಕ್ಷಣ ಪಡೆಯುವಂತೆ ಮಾಡಿದ್ದಾರೆ, ಆದರೆ, ಆ ಮಕ್ಕಳು ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿ ಅವರು ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬಂತಾಗುತ್ತದೆ. ಪೋಷಕರು ಹೋದರೂ ಕೆಲ ಮಕ್ಕಳ ತಮ್ಮ ಕುಟುಂಬದ ವೖದ್ಧರು, ಇತರೆ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದು, ತಂದೆ-ತಾಯಿ ಇಲ್ಲದೇ ಮನೆಯಲ್ಲಿ ಏಕಾಂಗಿತನ ಕಾಡುತ್ತದೆ. ಕೆಲ ಬಾಲಕಿಯರಿಗೆ ಮನೆಯಲ್ಲಿ ರಕ್ಷಣೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ, ಗುಳೆಯಿಂದ ಮಕ್ಕಳ ಭವಿಷ್ಯ ತೂಗೂಯ್ಯೆಲೆಯಲ್ಲಿದೆ.ಅಖಂಡ ಕೂಡ್ಲಿಗಿ ತಾಲೂಕಿನ ತಾಂಡಾಗಳಿಂದ ಈಗಾಗಲೇ ಪೋಷಕರ ಜೊತೆಗೆ 287 ಮಕ್ಕಳು ವಲಸೆ ಕಾರ್ಡ್ ತೆಗೆದುಕೊಂಡು ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು, ಮಂಡ್ಯ ಕಡೆ ಹೋಗಿದ್ದಾರೆ. ಅಲ್ಲಿಯ ಸ್ಥಳೀಯ ಶಾಲೆಯಲ್ಲಿ ಈಗ ವಿದ್ಯೆ ಕಲಿಯುತ್ತಿದ್ದಾರೆ. ಕೈವಲ್ಯಾಪುರದಿಂದ 4 ವಿದ್ಯಾರ್ಥಿಗಳು, ಶಿವಪುರ ಗೊಲ್ಲರಹಟ್ಟಿಯಿಂದ 4, ಬಂಡೆಬಸಾಪುರ ತಾಂಡಾದಿಂದ 162, ಚಿಕ್ಕಜೋಗಿಹಳ್ಳಿ ತಾಂಡಾದಿಂದ 4, ಮೋತಿಕಲ್ ತಾಂಡಾದಿಂದ 8, ಪೂಜಾರಹಳ್ಳಿ ತಾಂಡಾದಿಂದ 5, ಗೋವಿಂದಗಿರಿ ತಾಂಡಾದಿಂದ 30, ಅಮರದೇವರಗುಡ್ಡ ತಾಂಡಾದಿಂದ 5, ಅಮರದೇವರಗುಡ್ಡ ಗ್ರಾಮದಿಂದ 6, ಶ್ರೀಕಂಠಾಪುರ ತಾಂಡಾದಿಂದ 21, ಲಿಂಗನಹಳ್ಳಿ ತಾಂಡಾದಿಂದ 3, ಅಪ್ಪೇನಹಳ್ಳಿ ತಾಂಡಾದಿಂದ 3, ಚಿಲುಮೆಹಳ್ಳಿ ತಾಂಡಾದಿಂದ 4, ತಿಮ್ಮಲಾಪುರ ಹಾಗೂ ತಿಮ್ಮಲಾಪುರ ತಾಂಡಾದಿಂದ 12, ದೊಡ್ಡಗೊಲ್ಲರಹಟ್ಟಿಯಿಂದ 16 ವಿದ್ಯಾರ್ಥಿಗಳು ವಲಸೆ ಕಾರ್ಡ್‌ಗಳನ್ನು ಪಡೆದು ದೂರದ ಊರುಗಳಲ್ಲಿ ಓದುತ್ತಿದ್ದಾರೆ.
ಕೂಡ್ಲಿಗಿ ತಾಲೂಕಿನಲ್ಲಿ ಗುಳೇ ಹೋದ 287 ಮಕ್ಕಳಿಗೆ ವಲಸೆ ಕಾರ್ಡ್ ನೀಡಿ ಕಳುಹಿಸಿದ್ದೇವೆ. ಇದಕ್ಕಿಂತ ಮೊದ್ಲು ಇಲ್ಲಿಯೇ ಮಕ್ಕಳನ್ನು ಇರಿಸಿದರೇ ವಸತಿಶಾಲೆ ಆರಂಭಿಸುತ್ತೇನೆ ಎಂದು ಮನವೊಲಿಸಿದ್ದೇವು. ಕೆಲವರು ನಮ್ಮ ಮಾತು ಕೇಳಿದ್ದಾರೆ. ಉಳಿದ ಮಕ್ಕಳು ಅವರ ಮನೆಯ ಹಿರಿಯರು, ಸಂಬಂಧಿಕರ ಜೊತೆ ವಾಸ ಮಾಡುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಯಲ್ಲಿಯೇ ಬಿಡಲು ಮನಸ್ಸು ಮಾಡಿದರೆ ಋುತುಮಾನ ಸೇತುಬಂಧ ಶಾಲೆ ತೆರೆಯುವ ಮೂಲಕ ಮಕ್ಕಳ ವಿದ್ಯಾಭ್ಯಾಸ, ಯೋಗಕ್ಷೇಮ ನೋಡಿಕೊಳ್ಳಲಾಗುವುದು ಎಂದು ಕೂಡ್ಲಿಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಹೇಳಿದ್ದಾರೆ.