ಕನ್ನಡಪ್ರಭ ವಾರ್ತೆ ಗದಗ:
ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಬರ ಅಧ್ಯಯನ ನಡೆಸಿದ ಡಿಕೆಶಿ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪೂರ, ಗದಗ ತಾಲೂಕಿನ ಹುಲಕೋಟಿ, ಕುರ್ತಕೋಟಿ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಜಮೀನುಗಳಿಗೆ ತೆರಳಿ, ಸೂರ್ಯಕಾಂತಿ, ಜೋಳ, ಹತ್ತಿ, ಕಡಲೆಕಾಯಿ ಸೇರಿದಂತೆ ವಿವಿಧ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು.ಜಮೀನುಗಳಿಗೆ ಭೇಟಿ: ರೈತರ ಜಮೀನುಗಳಿಗೆ ತೆರಳಿ, ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಬಿತ್ತನೆ, ಮಳೆ ಪ್ರಮಾಣ, ಬೆಳೆಗಳ ಬೆಳವಣಿಗೆ ಹಾಗೂ ನಷ್ಟದ ಕುರಿತು ಮಾಹಿತಿ ಪಡೆದರು. ಕದಾಂಪೂರ, ಕುರ್ತಕೋಟಿಯಲ್ಲಿ ಕೃಷಿ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿವೆಯೇ ಎಂಬುದನ್ನು ವಿಚಾರಿಸಿದರು. ಬಳಿಕ, ಹುಲಕೋಟಿ ಗ್ರಾ.ಪಂ. ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಬರದ ಪರಿಸ್ಥಿತಿ ಉಂಟಾಗಿದ್ದು, ಈಗಾಗಲೇ ಒಂದು ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಉಳಿದ ಆರು ತಾಲೂಕುಗಳನ್ನೂ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ರೈತರು ಈ ವೇಳೆ ಮುಖ್ಯಮಂತ್ರಿಗೆ ಮನವಿ ಮಾಡಿದರು. ರೈತರ ಮನವಿಗೆ ಸ್ಪಂದಿಸಿದ ಸಿಎಂ, ಬರ ಪರಿಸ್ಥಿತಿ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನಷ್ಟು ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಲಾಗುವುದು. ಬಳಿಕ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವರದಿ ಸಿದ್ಧಪಡಿಸಿ, ಮತ್ತಷ್ಟು ಅರ್ಹ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಅಧಿಕಾರಿಗಳ ಜೊತೆ ಸಭೆ:ಬಳಿಕ ಸಂಜೆ, ಗದಗದ ಜಿ.ಪಂ.ಸಭಾಭವನದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾ ಸಚಿವರು ಪ್ರತಿ ತಾಲೂಕಿಗೆ ಭೇಟಿ ನೀಡಿ, ವಾಸ್ತವಾಂಶದ ವರದಿ ನೀಡಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಳಗಳಲ್ಲಿ ವಾಸವಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ತಾಲೂಕು ಕೇಂದ್ರದಲ್ಲೇ ವಾಸವಿದ್ದು ಸಾರ್ವಜನಿಕರಿಗೆ ಲಭ್ಯವಿರಬೇಕು ಎಂದು ತಾಕೀತು ಮಾಡಿದರು.
ಬರಗಾಲ ಕುರಿತ ನಮ್ಮ ವರದಿ ಕೇಂದ್ರದ ವರದಿ ಜತೆ ಹೊಂದಾಣಿಕೆ ಆಗಬೇಕು. ದೆಹಲಿಯಿಂದ ಬರುವ ಬರ ಅಧ್ಯಯನ ತಂಡಕ್ಕೆ ನಮ್ಮ ವರದಿ ಒಪ್ಪಿಗೆ ಆಗಬೇಕು. ಆಗ ಮಾತ್ರ ಕೇಂದ್ರ ಸರ್ಕಾರ ನೆರವು ನೀಡಲಿದೆ. ನಾವು ನಮ್ಮ ಕೈಲಾದ ಕ್ರಮ ಕೈಗೊಂಡಿದ್ದೇವೆ. ಕುಡಿಯುವ ನೀರಿನ ಪೂರೈಕೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕುಡಿಯುವ ನೀರಿಗಾಗಿ ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹೆಚ್ಚುವರಿ ಹಣ ಇಡಲಾಗಿದೆ. ಬರ ನಿರ್ವಹಣೆ ಕುರಿತು ಗಮನ ಹರಿಸಲು ಪ್ರತಿಯೊಬ್ಬ ಜಿಲ್ಲಾಧಿಕಾರಿಗೂ ಸೂಚಿಸಲಾಗಿದೆ ಎಂದು ಹೇಳಿದರು.