ಸೆಪ್ಟಂಬರ್‌ 25, 26ರಂದು ರಾಜ್ಯ ಗ್ರಂಥಪಾಲಕರ 2ನೇ ಸಮ್ಮೇಳನ

KannadaprabhaNewsNetwork |  
Published : Sep 22, 2026, 02:00 AM IST
ಸೆ. 25, 26ರಂದು ನಡೆಯಲಿರುವ ರಾಜ್ಯ ಮಟ್ಟದ ಗ್ರಂಥಪಾಲಕರ ಸಮ್ಮೇಳನ ಕುರಿತು ಸುದ್ದಿಗೋಷ್ಠಿಯಲ್ಲಿ ಶಂಕರ ಹಲಗತ್ತಿ ಮಾತನಾಡಿದರು. | Kannada Prabha

ಸಾರಾಂಶ

ಪ್ರಸ್ತುತ ಡಿಜಿಟಲ್‌ ಕಾಲದಲ್ಲಿ ಓದುವ ಹವ್ಯಾಸ ಕಡಿಮೆಯಾಗಿದ್ದು, ಗ್ರಂಥಾಲಯಗಳು ಸಹ ಸೊರಗಿವೆ. ಈ ಹಿನ್ನೆಲೆಯಲ್ಲಿ ಗ್ರಂಥಾಲಯಕ್ಕಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸಮ್ಮೇಳನ ಆಯೋಜಿಸಿದೆ.

ಧಾರವಾಡ:

ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಸೆ. 25 ಹಾಗೂ 26ರಂದು ಸಂಘದ ಡಾ. ಪಾಟೀಲ ಪುಟ್ಟಪ್ಪ ಭವನದಲ್ಲಿ ಕರ್ನಾಟಕ ರಾಜ್ಯ ಗ್ರಂಥಪಾಲಕರ 2ನೇ ಸಮ್ಮೇಳನ ಆಯೋಜಿಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೆ. 25ರಂದು ಬೆಳಗ್ಗೆ 10.30ಕ್ಕೆ ಧಾರವಾಡ ಐಐಐಟಿ ನಿರ್ದೇಶಕ ಡಾ. ಎಸ್‌.ಆರ್‌. ಮಹದೇವಪ್ರಸನ್‌ ಸಮ್ಮೇಳನಕ್ಕೆ ಚಾಲನೆ ನೀಡುವರು. ಕವಿವಿ ಕುಲಪತಿ ಡಾ. ಎ.ಎಂ. ಖಾನ್‌, ಸಮ್ಮೇಳನದ ನಿರ್ದೇಶಕ ಪ್ರೊ. ಎಸ್‌.ಎಲ್‌. ಸಂಗಮ ಭಾಗವಹಿಸುವರು ಎಂದರು.

ಪ್ರಸ್ತುತ ಡಿಜಿಟಲ್‌ ಕಾಲದಲ್ಲಿ ಓದುವ ಹವ್ಯಾಸ ಕಡಿಮೆಯಾಗಿದ್ದು, ಗ್ರಂಥಾಲಯಗಳು ಸಹ ಸೊರಗಿವೆ. ಈ ಹಿನ್ನೆಲೆಯಲ್ಲಿ ಗ್ರಂಥಾಲಯಕ್ಕಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸಮ್ಮೇಳನ ಆಯೋಜಿಸಿದೆ. ಎರಡು ದಿನಗಳ ಸಮ್ಮೇಳನದಲ್ಲಿ ಕೃತಕ ಬುದ್ಧಿಮತ್ತೆ-ಮೂಲ ಸಿದ್ಧಾಂತ, ಎಐ, ಮೊಬೈಲ್‌, ಸ್ಮಾರ್ಟ್‌ ಲೈಬ್ರರೀಜ್‌, ವಿಶ್ವವಿದ್ಯಾಲಯ ಗ್ರಂಥಾಲಯಗಳು-ಕೃಷಿ, ತೋಟಗಾರಿಕೆ, ವೈದ್ಯಕೀಯ ಮತ್ತು ಕಾನೂನು ವಿವಿ ಮತ್ತು ಎಐ, ಓದುವ ಸಂಸ್ಕೃತಿ-ಹವ್ಯಾಸ, ಮನೆ-ಮನೆ, ವೈಯಕ್ತಿಕ ಗ್ರಂಥಾಲಯಗಳು, ಮಕ್ಕಳ ಗ್ರಂಥಾಲಯ-ಶಾಲಾ ಗ್ರಂಥಾಲಯಗಳು, ಸಂಶೋಧನಾ ದತ್ತಾಂಶ ಮಾನಕಗಳು, ಗ್ರಂಥಾಲಯ ಸಹಕಾರ ಹಾಗೂ ಕೃತಕ ಬುದ್ಧಿಮತ್ತೆ ಒಳಿತು, ಕೆಡಕು ಅಂತಹ ಒಂಭತ್ತು ಗೋಷ್ಠಿಗಳು ನಡೆಯಲಿವೆ. ಪ್ರತಿ ಗೋಷ್ಠಿಯಲ್ಲಿ ಐದಕ್ಕೂ ಹೆಚ್ಚು ಗ್ರಂಥಪಾಲಕರು, ಚಿಂತಕರು ತಮ್ಮ ಚಿಂತನೆಗಳನ್ನು ಮಂಡಿಸಲಿದ್ದಾರೆ ಎಂದರು.

ಈ ಸಮ್ಮೇಳನದಲ್ಲಿ 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದು, ಅವರಿಗೆ ಊಟ, ವಸತಿ ವ್ಯವಸ್ಥೆಯನ್ನು ಸಂಘವು ಮಾಡಿಕೊಂಡಿದೆ. ಈಗಾಗಲೇ 100ಕ್ಕೂ ಹೆಚ್ಚು ಜನರು ಆನ್‌ಲೈನ್‌ ನೋಂದಣಿ ಮಾಡಿದ್ದು, ಸ್ಥಳದಲ್ಲೂ ನೋಂದಣಿ ಮಾಡಿಕೊಳ್ಳಬಹುದು ಎಂದ ಅವರು, ಸೆ. 26ರ ಬೆಳಗ್ಗೆ 7ಕ್ಕೆ ರಾ.ಹ. ದೇಶಪಾಂಡೆ ಅವರ ನಿವಾಸಕ್ಕೆ ಭೇಟಿಯಾಗಿ, ಕವಿವಿ ಬಳಿ ಇರುವ ಬಾಲಬಳಗ ಶಾಲೆಯಲ್ಲಿ ಹೊಸದಾಗಿ ನಿರ್ಮಿಸಿರುವ ಹೀಗೊಂದು ಮಗು ಸ್ನೇಹಿ-ಪರಿಸರ ಸ್ನೇಹಿ ಗ್ರಂಥಾಲಯವನ್ನು ಪ್ರತಿನಿಧಿಗಳಿಗೆ ತೋರಿಸಲಾಗುವುದು ಎಂದು ಹೇಳಿದರು.

ಸೆ. 26ರ ಸಂಜೆ 6ಕ್ಕೆ ವಿಶ್ರಾಂತ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಸಮಾರೋಪ ನುಡಿ ಹೇಳಲಿದ್ದು, ಪ್ರೊ. ಐ.ಜಿ. ಸನದಿ, ಪ್ರೊ. ವಿನಾಯಕ ಬಂಕಾಪುರ, ಪ್ರೊ. ಪಿ.ವಿ. ಕೊಣ್ಣೂರ, ಡಾ. ಎಸ್‌.ಎಲ್‌. ಕಾಡದೇವರಮಠ ಹಾಗೂ ಡಾ. ಕೃಷ್ಣಪ್ಪ ಎಂ. ಭಾಗವಹಿಸುತ್ತಾರೆ. ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಪದಾಧಿಕಾರಿಗಳಾದ ಸಂಜೀವ ಕುಲಕರ್ಣಿ, ಡಾ.ಮಹೇಶ ಹೊರಕೇರಿ, ವೀರಣ್ಣ ಒಡ್ಡೀನ, ಶಂಕರ ಕುಂಬಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಆಯುಷ್ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ
ಮೆಕ್ಕೆಜೋಳಕ್ಕೆ ಬೆಲೆ ಇದ್ದರೂ ಇಳುವರಿಯಲ್ಲಿ ಕುಸಿತ!