ಹೂವಿನಹಡಗಲಿ:ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನ.22 ರಂದು ರಂಗಭಾರತಿ ಕಲಾ ಮಂದಿರದಲ್ಲಿ ಜರುಗಲಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಹೇಳಿದರು.
ನ.22 ರಂದು ಬೆಳಗ್ಗೆ 7.30ಕ್ಕೆ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ ರಾಷ್ಟ್ರ ಧ್ವಜಾರೋಹಣ ನೆರವೇರಿಸುತ್ತಾರೆ, ಜಿಲ್ಲಾ ಪಂಚ ಗ್ಯಾರಂಟಿ ಉಪಾಧ್ಯಕ್ಷ ಕೆ.ಎಸ್. ಶಾಂತನಗೌಡ ನಾಡಧ್ವಜ, ಕಸಾಪ ಅಧ್ಯಕ್ಷ ಟಿ. ವೀರೇಂದ್ರ ಪಾಟೀಲ್ ಪರಿಷತ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕನ್ನಡ ಭುನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗವಿಮಠದಿಂದ ಸಕಲ ವಾದ್ಯ ವೈಭವ ಕುಂಭ, ಕಳಸ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಹೊರಡಲಿದ್ದು, ಮೆರವಣಿಗೆಗೆ ಸಿಪಿಐ ಮಲ್ಲಪ್ಪ ಹೂಗಾರ, ಪಂಚ ಗ್ಯಾರಂಟಿ ಜಿಲ್ಲಾ ಸಮಿತಿ ಸದಸ್ಯ ಗುರುವಿನ ರವೀಂದ್ರ ಚಾಲನೆ ನೀಡುತ್ತಾರೆ ಎಂದರು.
ಬೆಳಗ್ಗೆ 10.30ಕ್ಕೆ ನಡೆಯುವ ಸಮ್ಮೇಳನ ಕಾರ್ಯಕ್ರಮದಲ್ಲಿ ಗವಿಮಠದ ಡಾ. ಹಿರಿಶಾಂತ ವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಉಪಸ್ಥಿತಿಯಲ್ಲಿ ಶಾಸಕ ಕೃಷ್ಣನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ. ಕೆ.ರವೀಂದ್ರನಾಥ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ವಿದ್ವಾಂಸ ಡಾ. ಕೆ.ರುದ್ರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಟಿ.ವೀರೇಂದ್ರ ಪಾಟೀಲ್ ಭಾಗವಹಿಸಲಿದ್ದಾರೆ.ಇದೇ ವೇಳೆ ಡಾ. ಕೆ.ರುದ್ರಪ್ಪ, ಡಾ. ಕೆ.ರವೀಂದ್ರನಾಥ, ಡಾ. ಮುದೇನೂರು ನಿಂಗಪ್ಪ ಸಂಪಾದಕತ್ವದ ಕನ್ನಡ ಬಯಲಾಟ ಚರಿತೆ ಸಂಪುಟ-1 ಪುಸ್ತಕವನ್ನು ಗೋಟಗೋಡಿಯ ಕರ್ನಾಟಕ ಜಾನಪದ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಲೋಕಾರ್ಪಣೆ ಮಾಡುತ್ತಾರೆ. ಪುಸ್ತಕ ಮಳಿಗೆಯನ್ನು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಚಿತ್ರಕಲಾ ಮಳಿಗೆಗೆ ಮಾಜಿ ಶಾಸಕ ಚಂದ್ರನಾಯ್ಕ ಚಾಲನೆ ನೀಡಲಿದ್ದಾರೆ ಎಂದರು.
ಕವಿಗೋಷ್ಠಿ, ಸನ್ಮಾನ, ಮಹಿಳಾ ಕವಿಗೋಷ್ಠಿ, ಬಹಿರಂಗ ಅಧಿವೇಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮಾರೋಪ ಕಾರ್ಯಕ್ರಮ ಜರುಗುತ್ತವೆ ಎಂದರು.