ಬ್ಯಾಡಗಿ: ಧಾರ್ಮಿಕ ಹಾಗೂ ಶೈಕ್ಷಣಿಕ ಚಿಂತನೆಗಳಿಂದ ಸಮಾಜದ ಸ್ತರಗಳಲ್ಲಿನ ಮೇಲು- ಕೀಳೆಂಬ ಅಂತರವನ್ನು ಕಡಿಮೆ ಮಾಡಲು ಸಾಧ್ಯವಿದೆ. ಹೀಗಾಗಿ ಹೊರಬೀರೇಶ್ವರ ದೇವಸ್ಥಾನದಲ್ಲಿ ಸಮುದಾಯ ಭವನ ಸೇರಿದಂತೆ ಶೈಕ್ಷಣಿಕ ಸೌಲಭ್ಯಗಳಿಗಾಗಿ ₹3 ಕೋಟಿ ಅನುದಾನ ನೀಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.ಪಟ್ಟಣದ ಶಿಡೇನೂರ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಹೊರಬೀರೇಶ್ವರ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಕಾರ‍್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರಸ್ತುತ ಸರ್ಕಾರದಿಂದ ಬೀರೇಶ್ವರ ದೇವಸ್ಥಾನ ನಿರ್ಮಾಣಕ್ಕಾಗಿ 3 ಎಕರೆ ಜಾಗೆಯನ್ನು ಮಂಜೂರು ಮಾಡಲಾಗಿತ್ತು. ಈ ಜಾಗದಲ್ಲಿ ಧಾರ್ಮಿಕ ಹಾಗೂ ಶೈಕ್ಷಣಿಕ ಉದ್ದೇಶಗಳನ್ನು ಈಡೇರಿಸಲು ಮುಂದಾಗಿದ್ದು, ಸುಸಜ್ಜಿತವಾದ ವಸತಿ ಸಹಿತ ಶಾಲಾ- ಕಾಲೇಜು ಸ್ಥಾಪನೆಗೆ ಅಗತ್ಯವಿರುವ ಅನುದಾನ ನೀಡುವುದಾಗಿ ತಿಳಿಸಿದ ಅವರು, ರಾಜಕೀಯ ಬೇರೆ, ವಾಸ್ತವದಲ್ಲಿ ಜೀವನವೇ ಬೇರೆ. ಬ್ಯಾಡಗಿ ಜನರು ಪಕ್ಷಾತೀತ, ಜಾತ್ಯತೀತವಾಗಿ ಬೀರೇಶ್ವರ ದೇವಸ್ಥಾನಕ್ಕೆ ಸಹಕಾರ ನೀಡಿದ್ದಾರೆ ಎಂದರು.ಗುರುವಿನ ಚಿಂತನೆಗಳು ಅಗತ್ಯ: ಸಾನಿಧ್ಯ ವಹಿಸಿದ್ದ ಕನಕಗುರುಪೀಠದ ನಿರಂಜನಾನಂದಪುರಿ ಶ್ರೀ ಮಾತನಾಡಿ, ಧಾರ್ಮಿಕ ಅಪ್ರಬುದ್ಧತೆ ಹೆಚ್ಚುಅಪಾಯಕಾರಿ. ಇದರಿಂದ ಸಮಾಜದಲ್ಲಿ ಸಾಮರಸ್ಯದ ಬದಲು ಪರಸ್ಪರ ದ್ವೇಷ ಪ್ರದರ್ಶಿತಗೊಳ್ಳುತ್ತಿವೆ. ಪ್ರಸ್ತುತ ಕುರುಬ ಸಮಾಜ ಗಟ್ಟಿಗೊಳ್ಳಬೇಕಾದಲ್ಲಿ ಗುರುವಿನ ಚಿಂತನೆಗಳು ಅಗತ್ಯವಿದೆ. ಅಲ್ಲದೇ ಇನ್ನೊಂದು ಸಮಾಜಕ್ಕೆ ತೊಂದರೆ ಕೊಡದಂತೆ ಕುರುಬ ಸಮಾಜ ಕಟ್ಟಬೇಕಾಗಿದೆ ಎಂದರು.ಕುರುಬ ಸಮಾಜ ಧನ್ಯ: ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸಾಮಾಜಿಕ, ಸಾಂಸ್ಕೃತಿಕ, ಪಾರಮಾರ್ಥಿಕ ಹಾಗೂ ಸ್ವತಂತ್ರ ಮನೋಧರ್ಮ ಸಹ ಗುರುವಿನ ಮಾರ್ಗದರ್ಶನದಿಂದ ಬೆಳಕಿಗೆ ಬಂದಿವೆ. ಸಮಾಜ ಮುನ್ನಡೆಯಬೇಕಾದರೆ ಗುರುವಿನ ಸನ್ಮಾರ್ಗ ಅವಶ್ಯಕ. ಕಾಲಕಾಲಕ್ಕೆ ಸಮಾಜವನ್ನು ಎಚ್ಚರಿಸುತ್ತಿರುವ ನಿರಂಜನಾನಂದ ಶ್ರೀಗಳನ್ನು ಪಡೆದ ಕುರುಬ ಸಮಾಜ ಧನ್ಯವೆಂದರು.
ಧಾರ್ಮಿಕ ಅಪ್ರಬುದ್ಧತೆ ಹೆಚ್ಚುಅಪಾಯಕಾರಿ. ಇದರಿಂದ ಸಮಾಜದಲ್ಲಿ ಸಾಮರಸ್ಯದ ಬದಲು ಪರಸ್ಪರ ದ್ವೇಷ ಪ್ರದರ್ಶಿತಗೊಳ್ಳುತ್ತಿವೆ.
----