ಕನ್ನಡಪ್ರಭ ವಾರ್ತೆ ಬೀದರ್
ಬಿಲ್ಡ್‌ಟೆಕ್ 2025 ಕ್ರೆಡೈ ಬೀದರ್, ಇಂಡಿಯನ್ ಇನ್ಸಿಟ್ಯೂಟ್ ಆಫ್ ಕಾಂಕ್ರೀಟ್ ಮತ್ತು ಯುಎಸ್ ಕಮ್ಯೂನಿಕೇಶನ್ ಸಹಯೋಗದೊಂದಿಗೆ ಬೀದರ್ ನಗರದ ಝೀರಾ ಕಲ್ಯಾಣ ಮಂಟಪದಲ್ಲಿ ಜುಲೈ 18, 19, 20 ರಂದು ವಸ್ತು ಪ್ರದರ್ಶನ ಏರ್ಪಡಿಸಿದ್ದೇವೆ ಎಂದು ಇಂಡಿಯನ್ ಕಾಂಕ್ರಿಟ್ ಇನ್ಸಿಟ್ಯೂಟ್ ಅಧ್ಯಕ್ಷರಾದ ಇಂಜಿನಿಯರ್ ಹಾವಶೆಟ್ಟಿ ಪಾಟೀಲ ತಿಳಿಸಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಾಭರಹಿತ ಸಂಸ್ಥೆಯಾಗಿರುವ ಈ ಸಂಸ್ಥೆ ಕಾಂಕ್ರೀಟ್ ಕುರಿತು ಜ್ಞಾನವನ್ನು ಪ್ರಸಾರ ಮಾಡುವುದು, ಕಾಂಕ್ರೀಟ್ ತಂತ್ರಜ್ಞಾನ ಮತ್ತು ನಿರ್ಮಾಣವನ್ನು ಉತ್ತೇಜಿಸುವುದು ಮತ್ತು ಕಾಂಕ್ರೀಟ್‌ನ ಸಂಶೋಧನಾ ಅಗತ್ಯಗಳನ್ನು ಪರಿಹರಿಸಲು ಇದು ಸಮರ್ಪಿತವಾಗಿದೆ.
ಕಟ್ಟಡ ಕಟ್ಟುವ ಉದ್ದೇಶ ಹೊಂದಿರುವ ಸಾರ್ವಜನಿಕರಿಗೆ ಮತ್ತು ಈಗಾಗಲೇ ಮನೆ ಕಟ್ಟುತ್ತಿರುವವರಿಗೆ ಕಟ್ಟಡ ಸಾಮಗ್ರಿಗಳ ಬಗ್ಗೆ ಸವಿವರ ಮಾಹಿತಿ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.ಸಾರ್ವಜನಿಕರು ಮುಕ್ತವಾಗಿ ಬಂದು ಕಟ್ಟಡ ಕಾಮಗಾರಿಗಳನ್ನು ವೀಕ್ಷಿಸಿ ತಮ್ಮ ತಮ್ಮ ಸಮಸ್ಯೆಗಳನ್ನು ಕಂಪನಿ ಪದಾಧಿಕಾರಿಗಳಿಗೆ ಮತ್ತು ಸ್ಥಳೀಯ ಡೀಲರ್ಸ್ ಗಳ ಜೊತೆ ಮುಕ್ತವಾಗಿ ಸಮಾಲೋಚಿಸಬಹುದು. ಮೂರು ದಿನ ಬೆಳಗ್ಗೆ 10:30 ಗಂಟೆಯಿಂದ ಸಾಯಂಕಾಲ 8:30 ಗಂಟೆ ವರೆಗೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತದೆ. ಕಟ್ಟಡ ಕಟ್ಟುವವರಿಗೆ ಮತ್ತು ಇತರೆ ಎಲ್ಲ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಮುಕ್ತ ಪ್ರವೇಶ ನೀಡಲಾಗಿದೆ ಎಂದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು ಸಂಸದ ಸಾಗರ ಖಂಡ್ರೆ ಉದ್ಘಾಟಿಸುವರು. ಕಲಬುರಗಿ ಈಶಾನ್ಯ ವಲಯದ ಲೋಕೊಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಶರಣಪ್ಪ ಸುಲಗುಂಟೆ, ಬೀದರ್ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ, ರಾಜೂರಿ ಸ್ಟೀಲ್‌ನ ನಿರ್ದೇಶಕ ಸಂತೋಷ ಮುಂದಾಡ, ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಮಂಡಳಿ ಸದಸ್ಯ ಮುರಳೀಧರ.ಜಿ.ಕೆ,ಕ್ರೆಡಾಯ್ ಅಧ್ಯಕ್ಷ ರವಿಂದ್ರನಾಥ ಮುಲಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಾವಶೆಟ್ಟಿ ಪಾಟೀಲ್ ಅಧ್ಯಕ್ಷತೆ ವಹಿಸುವರು.ಯು.ಎಸ್ ಕಮ್ಯುನಿಕೇಶನ್ ಮುಖ್ಯಸ್ಥ ಉಮಾಪತಿ, ಕ್ರೆಡಾಯ್ ಅಧ್ಯಕ್ಷ ರವಿಂದ್ರನಾಥ ಮೂಲಗೆ, ರಾಜೂರಿ ಸ್ಟೀಲ್ಸ್ ಅಧಿಕಾರಿ ಪ್ರದೀಪ ಕುಲಕರ್ಣಿ ಮಾತನಾಡಿದರು.
ರಾಜೂರಿ ಸ್ಟೀಲ್ ಮಾಲಿಕರಾದ ಸುಧೀರ ಅಗ್ರವಾಲ, ಕ್ರೆಡಾಯ್ ಕಾರ್ಯದರ್ಶಿ ಅನಿಲ ಖೇಣಿ, ಇತರೆ ಇಂಜಿನಿಯರ್‌ಗಳಾದ ಸೋಮಶೇಖರ ಪಾಟೀಲ, ಸತೀಶ ನೌಬಾದೆ ಹಾಜರಿದ್ದರು.