ಕನ್ನಡಪ್ರಭ ವಾರ್ತೆ ರಾಮನಗರ
ಶ್ರೀ ಚಾಮುಂಡೇಶ್ವರಿ ದೇವಿಯ ಕರಗ ಮಹೋತ್ಸವವು ಬುಧವಾರ ಬೆಳಗ್ಗೆ ಸಾವಿರಾರು ಭಕ್ತಾಧಿಗಳ ಜಯಘೋಷದ ನಡುವೆ ಸಂಪನ್ನಗೊಂಡಿತು.
ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ನಗರದ ಸಿಂಗ್ರಾಭೋವಿದೊಡ್ಡಿಯಲ್ಲಿರುವ ಶ್ರೀಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕರಗಧಾರಣೆ ಮಾಡಿ, ನಂತರ ದ್ಯಾವರಸೇಗೌಡನದೊಡ್ಡಿ, ಚಾಮುಂಡಿಪುರ, ವಿನಾಯಕನ ನಗರ, ಅಂಚೇಕೆಂಪೇಗೌಡನ ದೊಡ್ಡಿ, ಪೊಲೀಸ್ ಕ್ವಾಟ್ರಸ್, ಶೆಟ್ಟಿಹಳ್ಳಿ, ಮಾರ್ಗವಾಗಿ ಕುಂಬಾರ ಬೀದಿ, ಮೇಗಲ ಪೇಟೆ, ಹೂವಾಡಿಗರ ಬೀದಿ, ತಿಗಳರ ಬೀದಿ, ಐಜೂರು, ಮಶ್ವರ ರಸ್ತೆ, ಹನುಮಂತ ನಗರ ಅಗ್ರಹಾರ, ಚಾಮುಂಡೇಶ್ವರಿ ಬಡಾವಣೆ, ಶೆಟ್ಟಿ ಬಲಜಿಗರ ಬೀದಿ, ಗಾಂಧಿ ನಗರ, ಕಾಯಿಸೊಪ್ಪಿನ ಬೀದಿ, ಎಂ.ಜಿ ರಸ್ತೆ ನಂತರ ರಾಜಬೀದಿ ಮಾರ್ಗವಾಗಿ ಬಂದ ಕರಗ ಬುಧವಾರ ಬೆಳಗ್ಗೆ ಅಗ್ನಿಕೊಂಡ ಪ್ರವೇಶ ಮಾಡಿತು.ಕರಗ ಸಂಚರಿಸುವ ದಾರಿಗಳಲ್ಲಿ ಭಕ್ತರು ಹೂವಿನ ನೆಲ ಹಾಸನ್ನು ನಿರ್ಮಿಸಿ ಕರಗವನ್ನು ಬರಮಾಡಿಕೊಂಡರು. ಅಗ್ನಿಕೊಂಡದ ಬಳಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಅಗ್ನಿಕೊಂಡ ಪ್ರವೇಶದ ನಂತರ ಭಕ್ತರು ಕೊಂಡಕ್ಕೆ ಎಳ್ಳು ಮತ್ತು ಉಪ್ಪನ್ನು ಹಾಕುವ ಮೂಲಕ ಹರಕೆಯನ್ನು ತೀರಿಸಿಕೊಂಡರು.
ಕರಗ ಮಹೋತ್ಸವದಿಂದ ಇಡೀ ನಗರದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಭಕ್ತರು ದೇವಿಯನ್ನು ಕಣ್ತುಂಬಿ ಕೊಂಡು ಪುನೀತರಾದರು.
ರಾಮನಗರದ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರವರ ಕುಟುಂಬ ಗೈರಾಗಿತ್ತು.
ಕಳೆದ ವರ್ಷ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿರವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತೆರಳಿದ್ದರು. ಈ ವರ್ಷ ಕುಮಾರಸ್ವಾಮಿಯಾಗಲಿ ಅಥವಾ ನಿಖಿಲ್ ಕುಮಾರಸ್ವಾಮಿಯಾಗಲಿ ರಾಮನಗರಕ್ಕೆ ಭೇಟಿ ನೀಡಲೇ ಇಲ್ಲ.
ನಿಮ್ಮಗಳ ಆಶೀರ್ವಾದವೇ ನಮಗೆ ಶ್ರೀರಕ್ಷೆ: ಡಿ.ಕೆ.ಶಿವಕುಮಾರ್
ಭಕ್ತಿಯಿರುವ ಕಡೆ ಭಗವಂತ ಇರುತ್ತಾನೆ, ಶ್ರಮವಿರುವ ಕಡೆ ಫಲವಿದೆ. ಅಂತಹ ವಾತಾವರಣವನ್ನು ರಾಮನಗರದಲ್ಲಿ ಕಂಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ದುಖಃವನ್ನು ದೂರ ಮಾಡುವ ದೇವಿ ದುರ್ಗಾದೇವಿ ಈ ನಾಡಿನ ಜನತೆಗೆ ನೆಮ್ಮದಿ, ಸುಖ, ಶಾಂತಿ ತಂದು ಮಳೆ, ಬೆಳೆಯಾಗಲಿ ಎಂದು ದೇವಾಲಯದಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಪ್ರತಿ ವರ್ಷ ಶಕ್ತಿ ದೇವತೆ ಶ್ರೀಚಾಮುಂಡೇಶ್ವರಿ ದೇವಿ ಮತ್ತು ನಿಮ್ಮ ಆಶೀರ್ವಾದದಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ವಿರೋಧ ಪಕ್ಷದವರ ಬಗ್ಗೆ ಮಾತನಾಡುವುದಿಲ್ಲ. ನಮಗೆ ಜಿಲ್ಲೆಯ ಜನರು ಆಶೀರ್ವಾದ ಮಾಡಿದ್ದೀರಿ, ನಾನು ನಿಮ್ಮ ನಂಬಿಕೆಯನ್ನು ಉಳಿಸಿಕೊಂಡು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವುದಾಗಿ ಹೇಳಿದರು.ರಸಮಂಜರಿ ಕಾರ್ಯಕ್ರಮದಲ್ಲಿ ರಾಕ್ ಸ್ಟಾರ್ ಯುವರಾಜ್ ತಂಡದವರಿಂದ ಹಲವು ಗೀತೆಗಳನ್ನು ಹಾಡಿ ರಂಜಿಸಿ, ನೃತ್ಯ ಮಾಡಿದರು. ಮಿಮಿಕ್ರಿ ಗೋಪಿ ಅವರ ಹಾಸ್ಯ ಚಟಾಕಿಗೆ ಸಭಿಕರು ಮನಸೊರೆಗೊಂಡಿತು.
ಕಾರ್ಯಕ್ರಮದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕರಾದ ಎಚ್.ಎ.ಇಕ್ಬಾಲ್ ಹುಸೇನ್, ಎಚ್.ಸಿ.ಬಾಲಕೃಷ್ಣ, ಕೊಡಗು ಶಾಸಕ ಮಂತರ್ ಗೌಡ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಶ್ರೀ ಚಾಮುಂಡೇಶ್ವರಿ ಯುವ ಸಮಿತಿ ಕಾರ್ಯಾಧ್ಯಕ್ಷ ಸಿ.ಎನ್. ಆರ್. ವೆಂಕಟೇಶ್, ಅಧ್ಯಕ್ಷ ಎಚ್. ನರಸಿಂಹಯ್ಯ, ಕಾರ್ಯದರ್ಶಿ ಜಿ.ಕೆ.ಕುಮಾರ್, ಮುಖಂಡರಾದ ಕೆ.ರಮೇಶ್, ಕರಡಿಗೌಡನದೊಡ್ಡಿ ಉಮಾಶಂಕರ್, ನವೀನ್ ಗೌಡ, ರಾಜು, ರಘು, ಚಿಕ್ಕೇಗೌಡ, ಷಡಕ್ಷರಿ, ನಾಗೇಶ್, ಪುಟ್ಟಣ್ಣ, ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.