ಕನ್ನಡಪ್ರಭ ವಾರ್ತೆ ರಾಯಚೂರು
ಇಲ್ಲಿನ ನವೋದಯ ಎಜುಕೇಶನ್ ಟ್ರಸ್ಟ್ (ಎನ್‌ಇಟಿ) ಶಿಕ್ಷಣ ಸಂಸ್ಥೆಯಿಂದ ಪ್ರಸಕ್ತ ಸಾಲಿನ ರೀಗಲ್-24 ಅನ್ನು ಗರುವಾರದಿಂದ ಮಾ.30ರ ವರೆಗೆ ಆಯೋಜಿಸಿದ್ದು, ಮೂರು ದಿನಗಳ ಕಾಲ ನಡೆಯಲಿರುವ ರೀಗಲ್‌ನಲ್ಲಿ ಘಟಿಕೋತ್ಸವ, ವಿವಿಧ ಪದವಿಗಳ ಪ್ರದಾನ, ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಎಸ್.ಆರ್.ರೆಡ್ಡಿ ತಿಳಿಸಿದರು.ಸ್ಥಳೀಯ ನವೋದಯ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಎರಡು ದಿನ ರೀಗಲ್ ನಡೆಸಲಾಗುತ್ತಿದ್ದು, ಆದರೆ ವಿವಿಧ ವಿಭಾಗಗಳಲ್ಲಿ ಸ್ನಾತಕ, ಸ್ನಾತಕೋತ್ತರ ಸೇರಿ ಇತರೆ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಈ ಬಾರಿಯೂ ಎರಡು ದಿನಗಳ ಕಾಲ ಘಟಿಕೋತ್ಸವ ನಡೆಸಲಾಗುತ್ತಿದೆ ಎಂದರು.
ಗುರುವಾರ ಸಂಜೆ 6.30ಕ್ಕೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ರೀಗಲ್‌ಗೆ ಚಾಲನೆ ನೀಡಲಿದ್ದಾರೆ. ಮಾ.29ರಂದು ಬೆಳಗ್ಗೆ 10 ಗಂಟೆಗೆ ನವೋದಯ ಕಾಲೇಜಿನ ಆಡಿಟೋರಿಯಂನಲ್ಲಿ ಘಟಿಕೋತ್ಸವ ಜರುಗಲಿದೆ. ಬೆಂಗಳೂರು ಜಯದೇವ ಹದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್.ರವೀಂದ್ರನಾಥ ಉದ್ಘಾಟಿಸುವರು. ಮಾ.30ರ ಬೆಳಗ್ಗೆ 10.45ಕ್ಕೆ ನಡೆಯುವ 2ನೇ ದಿನದ ಘಟಿಕೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ವೈದ್ಯಕೀಯ ನಿರ್ದೇಶನಾಲಯದ ನಿರ್ದೇಶಕ ಡಾ. ಬಿ.ಎಲ್.ಸುಜಾತಾ ರಾಠೋಡ್ ಉದ್ಘಾಟಿಸುವರು. ಈ ಬಾರಿ 567 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ವಿವರಿಸಿದರು.ಡೀಮ್ಡ್ ವಿವಿ ಸ್ಥಾಪನೆ ಪ್ರಸ್ತಾಪ: ಕಳೆದ 32 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ನವೋದಯ ಎಜುಕೇಶನ್ ಟ್ರಸ್ಟ್‌ನ್ನು ಮುಂದಿನ ದಿನಗಳಲ್ಲಿ ಡಿಮ್ಡ್ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲು ಪ್ರಯತ್ನಗಳು ಸಾಗಿವೆ ಎಂದು ಹೇಳಿದರು.
ಸಂಸ್ಥೆಯಿಂದ ನಗರ ಹಾಗೂ ಸುತ್ತಲಿನ ಗ್ರಾಮದ 12,600 ಜನರಿಗೆ ಆರೋಗ್ಯ ಕಾರ್ಡ್ ವಿತರಿಸಿದ್ದು, ನಿತ್ಯ 60-70 ಜನ ಉಚಿತ ಚಿಕತ್ಸೆ ಪಡೆಯುತ್ತಿದ್ದಾರೆ. ಉಳಿದ ಗ್ರಾಮಗಳಿಗೆ ಯೋಜನೆ ವಿಸ್ತರಿಸುವ ಉದ್ದೇಶವಿದೆ. ನಮ್ಮ ಟ್ರಸ್ಟ್ನಿಂದ 50 ವಿದ್ಯಾರ್ಥಿಗಳಿಗೆ ಉಚಿತ ಅಧ್ಯಯನಕ್ಕೆ ಅನುವು ಮಾಡಿಕೊಡಲಾಗಿದೆ. ಕಳೆದ ವರ್ಷ 114 ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಲಾಗಿದೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಡಾ.ಟಿ.ಶ್ರೀನಿವಾಸ, ಪ್ರಾಚಾರ್ಯ ಡಾ.ದೇವಾನಂದ, ವಿಜಯಕುಮಾರ್ ಸೇರಿ ಇತರರಿದ್ದರು.