ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ದಸರಾ -2025 ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ತೀರ್ಮಾನಿಸಿದ್ದು, ಈ ಸಂಬಂಧ ಜಿಲ್ಲೆಯ ಸಾವಿರಾರು ಕಲಾವಿದರಿಗೆ ತಮ್ಮ ಕಲೆಯನ್ನು ಪ್ರದರ್ಶನ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಸೋಮನಕುಣಿತ, ವೀರಗಾಸೆ, ಕೋಲಾಟ, ತೊಗಲುಗೊಂಬೆ, ಶಾಸ್ತ್ರೀಯ ಸಂಗೀತ, ಪೌರಾಣಿಕ ನಾಟಕ, ಯಕ್ಷಗಾನ, ಜೋಗಿಪದ ಸೇರಿದಂತೆ ನೂರಾರು ಕಲೆಗಳು ಪ್ರಚಲಿತದಲ್ಲಿವೆ. ಅಂತಹ ಕಲೆಗಳನ್ನು ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಆದ್ದರಿಂದ ತುಮಕೂರು ದಸರಾ ಕಾರ್ಯಕ್ರಮವನ್ನು 11 ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಸಾಂಸ್ಕೃತಿಕ ವೈಭವ ಸೃಷ್ಟಿಸಲು ಈಗಾಗಲೇ ಸಿದ್ದತೆ ನಡೆಸಲಾಗುತ್ತಿದೆ ಎಂದರು.ದಸರಾ ಆಕರ್ಷಣೆ ಹೆಚ್ಚಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ವಸ್ತುಪ್ರದರ್ಶನವನ್ನು ಆಯೋಜಿಸಲು ಸಿದ್ದತೆ ನಡೆಸಲಾಗಿದೆ. ಜಿಲ್ಲೆಯ ವಿಶೇಷತೆಗಳನ್ನು ಪ್ರದರ್ಶನ ಮಾಡುವುದು, ಫಲಪುಷ್ಪ ಪ್ರದರ್ಶನ, ಇಸ್ರೋ, ಎಚ್ ಎ ಎಲ್ ಸೇರಿದಂತೆ ಈ ಬಾರಿ ವಿನೂತನ ಮಾದರಿಯ ಪ್ರದರ್ಶನ ಏರ್ಪಡಿಸಲಾಗುವುದು. ಇದರ ಜೊತೆಗೆ ಜಿಲ್ಲೆಯ ವಿವಿಧ ಇಲಾಖೆಗಳ ಮಾಹಿತಿ ಮಳಿಗೆ ಮತ್ತು ವಸ್ತು ಪ್ರದರ್ಶನವನ್ನು ಏರ್ಪಡಿಸಿ ಜನರಿಗೆ ಮಾಹಿತಿ ನೀಡಲಾಗುವುದು ಎಂದರು.ತುಮಕೂರು ದಸರಾ ಮಹೋತ್ಸವಕ್ಕೆ ಈ ಬಾರಿ ಮೂರು ಆನೆಗಳನ್ನು ಕರೆಸಲಾಗುತ್ತಿದ್ದು, ದಸರಾಕ್ಕೆ ಹೆಚ್ಚು ಮೆರಗು ತರುತ್ತಿದೆ. ಕೊಡಗಿನ ದುಬಾರೆ ಆನೆ ಬಿಡಾರದಿಂದ ಮೂರು ಆನೆಗಳನ್ನು ದಸರಾಕ್ಕೆ ಕರೆಸಲಾಗುತ್ತಿದ್ದು, ಇವುಗಳಿಗೆ ತಾಲೀಮು ನೀಡಲಾಗುವುದು ಎಂದರು.ಸಭೆಯಲ್ಲಿ ಜಿಲ್ಲಾಪಂಚಾಯತಿ ಉಪಕಾರ್ಯದರ್ಶಿ ಸಂಜೀವಪ್ಪ ಕೆ.ಪಿ, ಮುಖ್ಯಲೆಕ್ಕಾಧಿಕಾರಿ ನರಸಿಂಹಮೂರ್ತಿ, ಉಪಕಾರ್ಯಶದರ್ಶಿ ಈಶ್ವರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ. ಈಶ್ವರ ಮಿರ್ಜಿ, ಜನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಸೇರಿದಂತೆ ಜಿಲ್ಲೆಯ ವಿವಿಧ ಕಲಾವಿದರು ಭಾಗಿಯಾಗಿದ್ದರು.