ಬಸವತತ್ತ್ವ ಪೀಠದಲ್ಲಿ ಶಿವಾನುಭವಗೋಷ್ಠಿ- 49 । ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ
ವಚನಾಕಾರರು ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆಯನ್ನು 12ನೇ ಶತಮಾನದಲ್ಲೇ ನೀಡಿದ್ದಾರೆ. ಜಗಜ್ಯೋತಿ ಬಸವಣ್ಣನವರ ಬದುಕಿನ ಅನುಭವಗಳು ಅನುಭಾವವಾಗಿ ಜನರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಇಡೀ ಜಗತ್ತಿಗೆ ನೈತಿಕ ಜಾಗೃತಿ ಕೊಟ್ಟ ಪರಿಣಾಮ ಕನ್ನಡ ಭಾಷೆಗೆ ಹೊಸ ಆಯಾಮ ದೊರೆಯಿತು ಎಂದು ನಟ, ನಿರ್ದೇಶಕ, ಟಿ.ಎಸ್. ನಾಗಾಭರಣ ಹೇಳಿದರು.
ಕಲ್ಯಾಣ ನಗರದ ಬಸವತತ್ತ್ವ ಪೀಠದಲ್ಲಿ ನಡೆದ ಶಿವಾನುಭವ ಗೋಷ್ಠಿ- 49, ಸಾಧಕ ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಐಸಿರಿ ಸಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇಂದಿಗೂ ಕನ್ನಡ ಭಾಷೆ ವರ್ಚಸ್ಸನ್ನು ಹೊಂದಿರುವುದಕ್ಕೆ ವಚನಾಕಾರರು ಕೊಟ್ಟ ಸಾಹಿತ್ಯ ಪ್ರಮುಖ ಕಾರಣ. ಪ್ರಜಾ ಸಾಹಿತ್ಯ ಎಂದು ಕರೆಯಲ್ಪಡುವುದೇ ವಚನ ಸಾಹಿತ್ಯ. ಸಾದಾ ಸೀದವಾಗಿ ಕೇಳಿದ ತಕ್ಷಣವೇ ಪರಿವರ್ತನೆಗೊಳ್ಳುವ ವಚನ ಸಾಹಿತ್ಯ ಬದುಕು ಕಟ್ಟಿಕೊಳ್ಳಲು ಪೂರಕವಾಗಿದೆ ಎಂದು ವಿಶ್ಲೇಷಿಸಿದರು.ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಬಸವ ತತ್ತ್ವ ಪೀಠದಲ್ಲಿ ಡಾ. ಬಸವ ಮರುಳಸಿದ್ದ ಸ್ವಾಮಿ ಪೀಠಾಧ್ಯಕ್ಷರಾದ ಬಳಿಕ ಈ ಭಾಗದಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ಪರಿಸರ ರಕ್ಷಣೆಗೆ ಎಲ್ಲರನ್ನೂ ಒಗ್ಗೂಡಿಸಿ ಸಂಘಟಿತ ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಶ್ರೀಗಳು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಾರ್ವಜನಿಕರು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬಂತೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ಮಾತನಾಡಿ, ಭರವಸೆ ಮತ್ತು ಸುಧಾರಣೆ ಗುರಿ ಹೊಂದಿರುವ ಐಸಿರಿ ಫೌಂಡೇಶನ್, ಸ್ವ ವಿಕಸನಕ್ಕಾಗಿ, ಹಸಿರು ಸಮರ್ಥನೀಯ ಭವಿಷ್ಯಕ್ಕಾಗಿ ಹಾಗೂ ಜವಾಬ್ದಾರಿಯುವ ನಾಗರಿಕ ನಿರ್ಮಾಣ ಎಂಬ ಮೂರು ಆಯಾಮದಡಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ತನ್ನ ಕಾರ್ಯಾರಂಭ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.
ಲೈಫ್‌ಲೈನ್ ಫೀಡ್ಸ್‌ನ ಸಂಸ್ಥಾಪಕ ಕಿಶೋರ್ ಕುಮಾರ್ ಹೆಗ್ಡೆ ಮಾತನಾಡಿ, ಐಸಿರಿ ಫೌಂಡೇಶನ್ ಪರಿಸರದ ಬಗ್ಗೆ ಅವರ ಕಾಳಜಿ, ನಿಮ್ಮೆಲ್ಲರ ಸಹಕಾರ ಅಭಿನಂದನೀಯ ಎಂದರು. ಸಾಹಿತಿ ನಾಗಶ್ರೀ ತ್ಯಾಗರಾಜ್ ’ಪದ್ಮಪತ್ರೆ’ ಮತ್ತು ಹುಳಿಗೆರೆ ಮಲ್ಲಿಕಾರ್ಜುನ್ ಅವರ ’ಒನ್ ಮಿನಿಟ್ ಪ್ರೀಸ್’ ಕೃತಿಗಳು ಲೋಕಾರ್ಪಣೆಗೊಂಡವು.
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭಾ ಆಯುಕ್ತ ಬಿ.ಸಿ. ಬಸವರಾಜು, ಎಚ್.ಸಿ. ಕಲ್ಮರುಡಪ್ಪ, ಸೋಮಶೇಖರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಪತ್ರಕರ್ತ ಕೆ.ಕೆ. ಕಲ್ಯಾಣ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.