ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಯೂತ್ ಗ್ರೂಪ್ ವತಿಯಿಂದ ೮೦ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಒಂದು ಸಾವಿರ ಅಡಿಯ ತಿರಂಗಾ ಪ್ರದರ್ಶನ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.ಇಲ್ಲಿನ ಆಸ್ಪತ್ರೆ ರಸ್ತೆಯಲ್ಲಿರುವ ನಿರಾಳ ಕ್ಲಿನಿಕ್ ಮುಂಭಾಗ ಗ್ರೂಪ್‌ನ ಅಧ್ಯಕ್ಷ ಡಾ.ಅನಿಲ್ ಆನಂದ್ ಧ್ವಜಾರೋಹಣ ನೆರವೇರಿಸಿದರು. ಯೂತ್ ಗ್ರೂಪ್‌ನ ಪದಾಧಿಕಾರಿಗಳು ಹಾಗೂ ಬಿಎಲ್‌ಎಸ್ ನರ್ಸಿಂಗ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತ್ರಿವರ್ಣಗಳಿಂದ ಕೂಡಿದ ಪೇಪರ್ ಬಾಂಬ್‌ಗಳನ್ನು ಸಿಡಿಸುವುದರೊಂದಿಗೆ ತಿರಂಗಾ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ನಿರಾಳ ಕ್ಲಿನಿಕ್‌ನಿಂದ ಆರಂಭವಾದ ತಿರಂಗ ಪ್ರದರ್ಶನ ಆಸ್ಪತ್ರೆ ರಸ್ತೆ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿ ವಿ.ವಿ.ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ರಿಲಾಯನ್ಸ್ ಟ್ರೆಂಡ್ಸ್ ಬಳಿ ಅಂತ್ಯಗೊಂಡಿತು.ಡಿಜೆಯಲ್ಲಿ ಮೊಳಗುತ್ತಿದ್ದ ದೇಶಭಕ್ತಿ ಗೀತೆಗಳೊಂದಿಗೆ ಬೃಹತ್ ತಿರಂಗಾ ವಿವಿಧ ರಸ್ತೆಗಳಲ್ಲಿ ಸಾಗುತ್ತಿದ್ದ ವೇಳೆ ಸಾವಿರಾರು ಸಾರ್ವಜನಿಕರು ರಸ್ತೆ ಬದಿಯಲ್ಲಿ ನಿಂತು ತಿರಂಗಾ ವೀಕ್ಷಿಸಿದರು. ಹಲವರು ಮಕ್ಕಳಿಂದ ಧ್ವಜದ ಮೇಲೆ ಹೂ ಹಾಕುವ ಮೂಲಕ ದೇಶಭಕ್ತಿ ಮೆರೆದರೆ, ಇನ್ನೂ ಕೆಲವರು ಧ್ವಜದ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಯೂತ್ ಗ್ರೂಪ್ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ತಲೆಗೆ ಕೇಸರಿ ಮತ್ತು ಹಸಿರು ಬಣ್ಣದ ಟೇಪುಗಳನ್ನು ಕಟ್ಟಿಕೊಂಡು ಸಾಗಿದ್ದು ವಿಶೇಷವಾಗಿತ್ತು. ಆಗಿಂದಾಗ್ಗೆ ತ್ರಿವರ್ಣಗಳಿಂದ ಕೂಡಿದ ಪೇಪರ್ ಬಾಂಬ್ ಸಿಡಿಸುತ್ತಾ ಮೆರವಣಿಗೆಗೆ ರಂಗು ತಂದಿತ್ತು.
ಜಾನಪದ ಕಲಾತಂಡ ಮೆರುಗು:
ಸಾವಿರ ಅಡಿ ಉದ್ದದ ತಿರಂಗಾ ಪ್ರದರ್ಶನಕ್ಕೆ ಜಾನಪದ ಕಲಾತಂಡಗಳು ಮೆರುಗು ನೀಡಿದವು. ಚನ್ನಪಟ್ಟಣದ ಶ್ರೀ ಪುನರ್ವಸು ಸಾಂಸ್ಕೃತಿಕ ಟ್ರಸ್ಟ್‌ನ ಮಹಿಳಾ ತಂಡದ ಡೊಳ್ಳು ಕುಣಿತ ಸದ್ದು ಮೇಳೈಸಿದ್ದರೆ, ಮತ್ತೊಂದೆಡೆ ಕೊತ್ತತ್ತಿ ರಾಜು ತಂಡದವರು ಪ್ರಸ್ತುತಪಡಿಸಿದ ಬೆಂಕಿ ಭರಾಟೆ ಎಲ್ಲರನ್ನೂ ರೋಮಾಂಚನಗೊಳಿಸಿತ್ತು.
ಸಾರ್ವಜನಿಕರಿಗೆ ಸಿಹಿ ವಿತರಣೆ:ತಿರಂಗಾ ಪ್ರದರ್ಶನದ ನಡುವೆಯೇ ಮೆರವಣಿಗೆಯುದ್ದಕ್ಕೂ ೮೦ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ತಿರಂಗಾ ಪ್ರದರ್ಶನಕ್ಕೂ ಮುನ್ನ ವಿದ್ಯಾರ್ಥಿಗಳು ಹಾಗೂ ಯೂತ್ ಗ್ರೂಪ್ ಪದಾಧಿಕಾರಿಗಳಿಗೆ ಉಪಹಾರ ವ್ಯವಸ್ಥೆ, ಸಿಹಿ ನೀಡಲಾಯಿತು.
ತಿರಂಗಾ ಪ್ರದರ್ಶನದಲ್ಲಿ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್, ಡಾ.ಯಾಶಿಕಾ ಅನಿಲ್, ಪದಾಧಿಕಾರಿಗಳಾದ ದರ್ಶನ್, ರಕ್ಷಿತ್, ದೀಪು, ಮಂಜು, ನವೀನ್, ವಿನಯ್, ದೇವಿ, ಯೋಗಿ, ಬಿ.ಎಂ.ಅಪ್ಪಾಜಪ್ಪ, ಹರ್ಷದ್, ಶಶಿ, ಬಿಎಲ್‌ಎಸ್ ಕಾಲೇಜಿನ ಉಪನ್ಯಾಸಕಿ ಶಿಲ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ತಿರಂಗಾದ ನೆರಳಿನಲ್ಲಿ ಭಾವೈಕ್ಯತೆ ಮೂಡಲಿ: ಡಾ.ಅನಿಲ್ ಆನಂದ್
ನಮ್ಮ ರಾಷ್ಟ್ರಗೀತೆಯಾದ ಜನಗಣಮನ ಅಧಿನಾಯಕ ಜಯಹೇ ಹಾಡಿದರಷ್ಟೇ ಸಾಲದು. ಅದರ ಅರ್ಥವನ್ನೂ ತಿಳಿದುಕೊಂಡು ಅದರಂತೆ ರಾಷ್ಟ್ರವನ್ನು ಕಟ್ಟಬೇಕು. ಜನಸಮೂಹದಿಂದ ಬರುವ ಭಾವನೆಗಳ ಅಧಿನಾಯಕನನ್ನು ಪ್ರಾರ್ಥಿಸುವ ಗೀತೆ ಜನಗಣಮನ ಎಂದು ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಹೇಳಿದರು.ತಿರಂಗದ ನೆರಳಿನಲ್ಲಿ ಭಾವೈಕ್ಯತೆ, ಏಕತೆ ಮೂಡಬೇಕು. ಎಲ್ಲ ಜಾತಿ, ಧರ್ಮ, ವರ್ಗದವರು ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ ಬದುಕಿದಾಗ ಪ್ರಜಾಪ್ರಭುತ್ವ ಬಲಿಷ್ಠವಾಗುತ್ತದೆ. ರಾಷ್ಟ್ರ ಶಕ್ತಿಶಾಲಿ ಹಾಗೂ ಅಭಿವೃದ್ಧಿಶೀಲ ರಾಷ್ಟ್ರವಾಗಿ ಬೆಳವಣಿಗೆ ಕಾಣುತ್ತದೆ. ವಿಭಿನ್ನತೆಯಲ್ಲಿ ಏಕತೆಯನ್ನು ಮೆರೆಯುವ ಸಾಮರ್ಥ್ಯವಿರುವುದು ಭಾರತಕ್ಕೆ ಮಾತ್ರ. ಹಾಗಾಗಿ ಎಲ್ಲಾ ಜನರ ಭಾವನೆಗಳನ್ನು ಗೌರವಿಸುವ, ಒಟ್ಟಾಗಿ ಮುನ್ನಡೆಯುವ ಮನಸ್ಸು ಎಲ್ಲರಲ್ಲೂ ಮೂಡುವಂತಾಗಲಿ ಎಂದು ಆಶಿಸಿದರು.