ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರೈತಸಂಘ (ಮೂಲ ಸಂಘಟನೆ)ದ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೆಆರ್‌ಎಸ್ ಅಣೆಕಟ್ಟೆಯಲ್ಲಿರುವ ನೀರಿನಿಂದ ಕೆರೆ-ಕಟ್ಟೆಗಳನ್ನು ತುಂಬಿಸಿಲ್ಲ. ಒಂದು ಬೆಳೆಗೆ ನೀರನ್ನೂ ಸಹ ಕೊಡುತ್ತಿಲ್ಲ. ಮಳೆ ಕೊರತೆಯಿಂದ ಭತ್ತದ ಒಟ್ಲು ಮಾಡಿಲ್ಲ, ನಾಟಿ ಹಾಕುವ ಅವಧಿ ಮುಗಿಯುತ್ತಾ ಬಂದಿದೆ. ರೈತರು ಬೆಳೆ ಬೆಳೆಯಲಾಗದೆ ಸಂಕಷ್ಟದಲ್ಲಿರುವಾಗ ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ರೈತರ ಹಿತ ಕಾಪಾಡುವುದಾಗಿ ಬಾಯಲ್ಲಿ ಹೇಳುವ ಆಳುವ ನಾಯಕರು ವಾಸ್ತವದಲ್ಲಿ ರೈತ ವಿರೋಧಿಗಳಂತೆಯೇ ವರ್ತಿಸುತ್ತಿದ್ದಾರೆ. ನಿಗದಿತ ಸಮಯಕ್ಕೆ ಬೆಳೆ ಬೆಳೆಯಲು ನೀರು ಕೊಡದೆ ಯಾವಾಗಲೋ ನೀರು ಕೊಟ್ಟರೆ ಏನು ಪ್ರಯೋಜನ. ತಮಿಳುನಾಡು ಕೇಳಿದ ಕೂಡಲೇ ನೀರು ಹರಿಸುವ ನೀವು ತಮಿಳುನಾಡಿನ ನೀರುಗಂಟಿಗಳು ಎಂದು ಆಕ್ರೋಶದಿಂದ ನುಡಿದರು.
ಇದೇ ವೇಳೆ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರು ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿದರು. ರೈತರ ಕೋರಿಕೆಯಂತೆ ಹೇಮಾವತಿ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಮೂರ್ನಾಲ್ಕು ದಿನದಲ್ಲಿ ಮುಂಗಾರು ಬೆಳೆಗಳಿಗೆ ನೀರು ಹರಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು. ಕೆರೆ-ಕಟ್ಟೆಗಳನ್ನು ತುಂಬಿಸಲಾಗುತ್ತಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಜೊತೆ ನಾವಿದ್ದು, ನಿಮ್ಮ ಹಿತ ಕಾಪಾಡುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಿವಳ್ಳಿ ಚಂದ್ರಶೇಖರ್, ಸೋ.ಸಿ.ಪ್ರಕಾಶ್, ಮಂಜೇಶ್‌ಗೌಡ, ಪಣ್ಣೇದೊಡ್ಡಿ ವೆಂಕಟೇಶ್, ಪ್ರಭುಲಿಂಗು, ಗೋಪಾಲಪುರ ಸುರೇಶ ಸೇರಿದಂತೆ ಹಲವರಿದ್ದರು.
ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಟ್ಟಿಲ್ಲ: ಚಲುವರಾಯಸ್ವಾಮಿಕನ್ನಡಪ್ರಭ ವಾರ್ತೆ ಮಂಡ್ಯ
ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಯುತ್ತಿರುವುದರಿಂದ ಇಲ್ಲಿಂದ ಬಿಡುವ ಅವಶ್ಯಕತೆ ಇಲ್ಲ ಎಂದು ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.ಕೆರೆ-ಕಟ್ಟೆಗಳನ್ನು ತುಂಬಿಸುವ ಹಾಗೂ ಜನ-ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ನಾಲೆಗಳಿಗೆ ನೀರನ್ನು ಕೆಆರ್‌ಎಸ್‌ನಿಂದ ಹರಿಯಬಿಡಲಾಗುತ್ತಿದೆ. ಅದನ್ನು ತಪ್ಪಾಗಿ ಅರ್ಥೈಸುವುದು ಬೇಡ. ಕೆಆರ್‌ಎಸ್‌ನಲ್ಲಿ ೧೧೦ ಅಡಿಯವರೆಗೆ ನೀರಿದೆ. ಏನೇ ಸಮಸ್ಯೆ ಇದ್ದರೂ ನಮ್ಮೊಂದಿಗೆ ನೇರವಾಗಿ ರೈತರು ಮಾತನಾಡಲಿ. ಇನ್ನೂ ಆಗಸ್ಟ್ ಕೊನೆ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದರು.