ಹೆಬ್ಬಾಳದಿಂದ ಅರಮನೆ ಮೈದಾನವರೆಗೆ 3 ಕಿ.ಮೀ. ಸುರಂಗ!

KannadaprabhaNewsNetwork |  
Published : Jan 30, 2024, 02:04 AM IST
ಸುರಂಗ ರಸ್ತೆಯ ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಹೆಬ್ಬಾಳದಿಂದ ಅರಮನೆ ಮೈದಾನವರೆಗೆ 3 ಕಿ.ಮೀ. ಸುರಂಗ! ಪ್ರತಿ ಕಿ.ಮೀ.ಗೆ ₹500 ಕೋಟಿ ವೆಚ್ಚ. ನಗರದ ಮೊದಲ, ಪ್ರಾಯೋಗಿಕ ಸುರಂಗ ರಸ್ತೆ. ಸರ್ಕಾರಕ್ಕೆ ಪಾಲಿಕೆ ಪ್ರಸ್ತಾವ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಮೊದಲ ಮತ್ತು ಪ್ರಾಯೋಗಿಕ ಸುರಂಗ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ ರೂಪಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ.

ರಾಜ್ಯ ಸರ್ಕಾರವು ನಗರದಲ್ಲಿ ವಾಹನ ಸಂಚಾರ ದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ ಸುರಂಗ ರಸ್ತೆಗಳ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಇದೀಗ ಬಿಬಿಎಂಪಿಯು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಬಳ್ಳಾರಿ ರಸ್ತೆಯಲ್ಲಿ ಮೊದಲ ಸುರಂಗ ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಿದ್ದು, ಈ ಸುರಂಗ ರಸ್ತೆಯು ಹೆಬ್ಬಾಳದಿಂದ ಅರಮನೆ ಮೈದಾನದ ವರೆಗೆ ಉದ್ದ ಸುಮಾರು 3 ಕಿ.ಮೀ. ಇರಲಿದೆ.

ಪ್ರತಿ ಕಿ.ಮೀ.ಗೆ ₹500 ಕೋಟಿ ವೆಚ್ಚ:

ಸುರಂಗ ರಸ್ತೆ ನಿರ್ಮಾಣಕ್ಕೆ ಮರ ಕತ್ತರಿಸುವುದು ಮತ್ತು ಭೂಸ್ವಾಧೀನದ ಅಗತ್ಯವಿಲ್ಲ. ಆದರೆ, ಒಂದು ಕಿಲೋ ಮೀಟರ್‌ ಉದ್ದದ ಸುರಂಗ ನಿರ್ಮಾಣಕ್ಕೆ ಕನಿಷ್ಠ ₹500 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಈ ಲೆಕ್ಕಾಚಾರದಂತೆ 3 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ₹1,500 ಕೋಟಿಯಿಂದ ₹2 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ದ್ವಿಮುಖ ಸುರಂಗ ರಸ್ತೆ ನಿರ್ಮಿಸಲು ಉದ್ದೇಶಿಸಿದ್ದು, ಇದು 4 ಪಥವಿರಲಿದೆ. ಇದಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದ್ದು, 2024-25ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಒದಗಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಇಲಾಖೆಗಳೊಂದಿಗೆ ಸಮನ್ವಯ:

ಹೆಬ್ಬಾಳದ ಬಳಿ ಉಪನಗರ ರೈಲು ಯೋಜನೆ ಹಾಗೂ ಮೆಟ್ರೋ ರೈಲ್ವೆ ಯೋಜನೆ ನಡೆಯುತ್ತಿದೆ. ಇದೀಗ ಸುರಂಗ ರಸ್ತೆ ನಿರ್ಮಾಣ ಯೋಜನೆಯನ್ನು ಬಿಬಿಎಂಪಿ ರೂಪಿಸಿಕೊಂಡಿದೆ. ಉಪನಗರ ರೈಲ್ವೆ ಹಾಗೂ ಮೆಟ್ರೋ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸುರಂಗ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ನಿಲ್ದಾಣ ನಿರ್ಮಾಣ

ಹೆಬ್ಬಾಳದಿಂದ ಮೇಖ್ರಿ ವೃತ್ತದ ಮುಂಭಾಗದ ಅರಮನೆ ಮೈದಾನದ ವರೆಗೆ ನಿರ್ಮಾಣಗೊಳ್ಳುವ ಸುರಂಗ ರಸ್ತೆಗೆ ಎರಡು ನಿಲ್ದಾಣಗಳನ್ನು ಮಾಡಲು ನಿರ್ಧರಿಸಲಾಗಿದೆ. ಸರ್ಕಾರಿ ಪಶು ವೈದ್ಯಕೀಯ ಕಾಲೇಜು ಹಾಗೂ ಅರಮನೆ ಮೈದಾನದ ಮುಂಭಾಗದಲ್ಲಿ ಈ ನಿಲ್ದಾಣ ನಿರ್ಮಿಸಲಾಗುತ್ತದೆ.

ದೋಣಿ ಮಾದರಿ ಸುರಂಗ

ಹೆಬ್ಬಾಳದಿಂದ ಮೇಖ್ರಿ ವೃತ್ತದವರೆಗೆ ಸುರಂಗ ರಸ್ತೆಯ ಯೋಜನೆಯು ದೋಣಿ ಮಾದರಿಯನ್ನು ಹೊಂದಿದೆ. ಈ ಮಾದರಿಯಲ್ಲಿ ಸುರಂಗವು ಅತಿ ಅಳದಲ್ಲಿ ಕೊರೆಯದೇ, ಕೇವಲ ಮೇಲ್ಭಾಗದಿಂದ ಸುಮಾರು 5 ಮೀಟರ್‌ ಅಳದಲ್ಲಿ ನಿರ್ಮಾಣ ಮಾಡಲಾಗುತ್ತದೆ.

ಮರ, ಭೂಸ್ವಾಧೀನ ಸಮಸ್ಯೆ ಇರುವುದಿಲ್ಲರಸ್ತೆ ಅಗಲೀಕರಣಕ್ಕೆ ಮತ್ತು ಫ್ಲೈಓವರ್ ನಿರ್ಮಾಣಕ್ಕೆ ಮರ ಕತ್ತರಿಸುವುದು ಹಾಗೂ ಭೂಸ್ವಾಧೀನ ಪ್ರಕ್ರಿಯೆ ಸಮಸ್ಯೆಗಳು ಬರಲಿದೆ. ಜತೆಗೆ ಭೂಸ್ವಾಧೀನಕ್ಕೆ ಅಧಿಕ ಪ್ರಮಾಣದ ವೆಚ್ಚ ಮಾಡಬೇಕಾಗಲಿದೆ. ಆ ಎಲ್ಲ ಅಂಶಗಳನ್ನು ಪರಿಗಣಿಸಿದರೆ, ಸುರಂಗ ರಸ್ತೆ ಸ್ವಲ್ಪ ಪ್ರಮಾಣದ ವೆಚ್ಚ ಮಾತ್ರ ಹೆಚ್ಚಾಗಲಿದೆ.

-ಬಿಎಸ್‌.ಪ್ರಹ್ಲಾದ್‌, ಮುಖ್ಯಸ್ಥ, ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ