ನವಲಗುಂದ:
ಮೊದಲ ದಿನ 4ನೇ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ರಜೆಯ ಅವಧಿಯೂ ಸೇರಿದಂತೆ ವಾಯವ್ಯ ಸಾರಿಗೆ ಸಂಸ್ಥೆಯು ಕಾಮದೇವರ ದರ್ಶನಕ್ಕಾಗಿ ಎಲ್ಲೆಡೆಯಿಂದ ವಿಶೇಷ ಬಸ್ ಸಂಚಾರ ಕಲ್ಪಿಸಿರುವುದು ಭಕ್ತ ಸಮೂಹ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ 3 ವರ್ಷಗಳಿಂದ ದೇವಸ್ಥಾನ ಟ್ರಸ್ಟ್ ಕಮಿಟಿ ಮುತವರ್ಜಿ ವಹಿಸಿ ನಿರಂತರ ಪ್ರಸಾದ ವ್ಯವಸ್ಥೆ ಮಾಡುತ್ತಿರುವುದೂ ದೂರದಿಂದ ಬಂದ ಭಕ್ತರಿಗೆ ಅನುಕೂಲವಾಗಿದೆ.
ಎರಡು ದಿನಳಗಿಂದ 24/7 ನಿರಂತರ ದರ್ಶನ ಹಾಗೂ ಪ್ರಸಾದ ವ್ಯವಸ್ಥೆಯನ್ನು ದೇವಸ್ಥಾನ ಟ್ರಸ್ಟ್ ಕಮಿಟಿ ತಾಲೂಕಿನ ನಾಗರಿಕರ ಸಹಕಾರದಿಂದ ಯಶಸ್ವಿಯಾಗಿ ನಿರ್ವಹಿಸಿತ್ತಿರುವುದೂ ಭಕ್ತರ ಮೆಚ್ಚುಗೆಗೆ ಸಾಕ್ಷಿಯಾಗಿದೆ. ಗದಗ, ಹುಬ್ಬಳ್ಳಿ, ಧಾರವಾಡದ ಜನತೆ ಸ್ವಂತ ವಾಹನಗಳಲ್ಲಿ ಬಂದರೆ ಯುವಕರು ಬೈಕ್ ಏರಿ ಹುಮ್ಮಸ್ಸಿನಿಂದ ದರ್ಶನ ಮಾಡಲು ಹಗಲು-ರಾತ್ರಿಯನ್ನದೆ ಆಗಮಿಸುತ್ತಿದ್ದಾರೆ.ಪಟ್ಟಣದ ಹಲವಾರು ಸಂಘಟನೆಗಳು ನಿರಂತರವಾಗಿ ತಂಪು ಪಾನೀಯ, ಹಣ್ಣು-ಹಂಪಲು ವಿತರಿಸುವ ಮೂಲಕ ಭಕ್ತರ ಆಯಾಸ ನಿವಾರಣೆಗೆ ಶ್ರಮಿಸುತ್ತಿದೆ. ವಿನೋದ ಅಸೂಟಿ ಅಭಿಮಾನಿ ಬಳಗದವರು ಬಿಸಿಲಿನಿಂದ ಬಸವಳಿದವರ ಬಾಯಾರಿಕೆ ನಿವಾರಿಸಲು ನೀರಿನ ಬಾಟಲ ವಿತರಿಸುತ್ತಿದ್ದಾರೆ. ಹಲವಾರು ಭಕ್ತರು ಬೆಳಗಿನ ಜಾವ ತುಲಾಭಾರ ಸೇವೆ ಮಾಡಿದರೆ, ನೂರಾರು ಮಹಿಳಾ ಭಕ್ತರು ಸೇರಿದಂತೆ ಇತರರು ದೀಡ್ ನಮಸ್ಕಾರ ಸೇವೆ ಸಲ್ಲಿಸಿ ತಮ್ಮ ಇಷ್ಟಾರ್ಥ ಈಡೇರಿಕೆಯ ಹರಕೆ ತೀರಿಸುತ್ತಿರುವುದೂ ಗಮನ ಸೆಳೆಯುತ್ತಿದೆ.
ಭಕ್ತರ ಇಷ್ಟಾರ್ಥ ಈಡೇರಿಸುವ ಕಾಮಣ್ಣ ದೇವರು ರಾಜ್ಯ-ಹೊರ ರಾಜ್ಯದಲ್ಲಿ ಪ್ರಸಿದ್ಧವಾಗಿದ್ದು ಹೋಳಿ ಸಂಭ್ರಮವನ್ನು ಕಾಮದೇವರ ದರ್ಶನ ಇನ್ನಷ್ಟು ಹೆಚ್ಚಿಸಿದೆ. ಅಲ್ಲದೆ ದರ್ಶನಕ್ಕೆ ನಿತ್ಯ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು ಅವರಿಗೆ ಯಾವುದೇ ತೊಂದರೆಯಾಗದಂತೆ ಪ್ರಸಾದದ ವ್ಯವಸ್ಥೆ ಮಾಡುತ್ತಿರುವ ಕಮಿಟಿ ಕಾರ್ಯ ಶ್ಲಾಘನೀಯವಾಗಿದೆ.
ಗಂಗಪ್ಪ ಮನಮಿ ಬಿಜೆಪಿ ಅಧ್ಯಕ್ಷ, ನವಲಗುಂದ ಮಂಡಲ