2 ಸಾವಿರ ಎಕರೆ ಪ್ರದೇಶದಲ್ಲಿ ಆ ನೆಧಾಮ ಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದು ಕೂಡಲೇ ಕಾರ್ಯ ಪ್ರವೃತ್ತರಾಗಿ ಮಾನವ–ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಶಾಸಕ ಎಚ್ ಕೆ ಸುರೇಶ್ ಆಗ್ರಹಿಸಿದರು. ಈ ಭಾಗದ ಆರ್ಥಿಕತೆ ಬಹುತೇಕ ಕಾಫಿ ಬೆಳೆಗೆ ಅವಲಂಬಿತವಾಗಿದೆ. ಕಾಫಿ ಬೆಳೆಯನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿ ಅಪಾರ ಕೊಡುಗೆ ನೀಡಿದ ಮಹಾನ್ ವ್ಯಕ್ತಿ ಸಿದ್ಧಾರ್ಥ ಹೆಗ್ಡೆ ಅವರ ಸೇವೆ ಹಾಗೂ ಕಾಫಿ ಬೆಳೆಗಾರರನ್ನು ಗೌರವಿಸುವ ಕಾರ್ಯ ಎಲ್ಲರಿಂದಲೂ ನಡೆಯಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಬೇಲೂರು
2 ಸಾವಿರ ಎಕರೆ ಪ್ರದೇಶದಲ್ಲಿ ಆನೆಧಾಮ ಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದು ಕೂಡಲೇ ಕಾರ್ಯ ಪ್ರವೃತ್ತರಾಗಿ ಮಾನವ–ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಶಾಸಕ ಎಚ್ ಕೆ ಸುರೇಶ್ ಆಗ್ರಹಿಸಿದರು. ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ಹಾಗೂ ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 25ನೇ ವರ್ಷದ ಬೆಳ್ಳಿ ಹಬ್ಬ, ವಾರ್ಷಿಕ ಮಹಾಸಭೆ ಮತ್ತು ಕೃಷಿ ಹಾಗೂ ತೋಟಗಾರಿಕೆ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಸದನದಲ್ಲಿ ಕಾಫಿ ಬೆಳೆಗಾರರ ಸಂಕಷ್ಟಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ, ಅವರಿಗೆ ನ್ಯಾಯ ಸಿಗುವಂತೆ ಪ್ರಯತ್ನಿಸಲಾಗುವುದು. ಕಾಫಿ ಬೆಳೆಗಾರರ ಸಂಕಷ್ಟಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಮಾನವ–ಆನೆ ಸಂಘರ್ಷ ಕುರಿತು ಈಗಾಗಲೇ ಸದನದಲ್ಲಿ ಮಾತನಾಡಿದ್ದೇನೆ. ಸಮರ್ಪಕ ಉತ್ತರ ಸಿಗದಿದ್ದರೂ, ಅರಣ್ಯ ಸಚಿವರ ಗಮನಕ್ಕೆ ಮತ್ತೊಮ್ಮೆ ಈ ಭಾಗದಲ್ಲಿ ಆಗುತ್ತಿರುವ ಅನಾಹುತಗಳನ್ನು ಗಮನಕ್ಕೆ ತಂದು, ಸದನದಲ್ಲಿ ಧ್ವನಿ ಎತ್ತುವೆ. ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಸಮಗ್ರವಾಗಿ ಚರ್ಚಿಸಲಾಗುವುದು. ಕಾಫಿಗೆ ನಮ್ಮ ಪ್ರದೇಶದಲ್ಲಿ ಅತ್ಯಂತ ಮಹತ್ವವಿದ್ದು, ಅದರ ಪರವಾಗಿ ನಾವು ನಿಲ್ಲುವ ಕೆಲಸ ಮಾಡುತ್ತೇವೆ ಎಂದರು. ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳು ಪ್ರಮುಖ ಕಾಫಿ ಬೆಳೆ ಪ್ರದೇಶಗಳಾಗಿವೆ. ಈ ಭಾಗದ ಆರ್ಥಿಕತೆ ಬಹುತೇಕ ಕಾಫಿ ಬೆಳೆಗೆ ಅವಲಂಬಿತವಾಗಿದೆ. ಕಾಫಿ ಬೆಳೆಯನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿ ಅಪಾರ ಕೊಡುಗೆ ನೀಡಿದ ಮಹಾನ್ ವ್ಯಕ್ತಿ ಸಿದ್ಧಾರ್ಥ ಹೆಗ್ಡೆ ಅವರ ಸೇವೆ ಹಾಗೂ ಕಾಫಿ ಬೆಳೆಗಾರರನ್ನು ಗೌರವಿಸುವ ಕಾರ್ಯ ಎಲ್ಲರಿಂದಲೂ ನಡೆಯಬೇಕು ಎಂದು ಹೇಳಿದರು.ಕಾಫಿ ಬೆಳೆಗಾರ ಸಂಘದ ಅಧ್ಯಕ್ಷ ಅದ್ಧೂರಿ ಕುಮಾರ್ ಮಾತನಾಡಿ ಕಾಫಿ ಬೆಳೆಗಾರರು ಯಾವುದೇ ಪ್ರದೇಶವನ್ನು ಒತ್ತುವರಿ ಮಾಡಿಲ್ಲ, ಕಾನೂನುಬದ್ಧವಾಗಿ ಸಾಗುವಳಿ ಮಾಡುತ್ತಿದ್ದೇವೆ. ಸರ್ಕಾರಕ್ಕೆ ತಪ್ಪು ಮಾಹಿತಿ ಹೋಗಬಾರದು. ಕೆಲವರು ಕಾಫಿ ಬೆಳೆಗಾರರ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಸಂಘದ ಎಲ್ಲಾ ಸದಸ್ಯರು ನಿಯಮಾನುಸಾರವೇ ಕೃಷಿ ಕಾರ್ಯ ಮಾಡುತ್ತಿದ್ದಾರೆ. ಅನಧಿಕೃತ ಒತ್ತುವರಿ ಎಂಬ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ತಿಳಿಸಿದರು. ಸಂಘವು ಇಂದು ಉತ್ತಮವಾಗಿ ಬೆಳೆಯುತ್ತಿರುವುದಕ್ಕೆ ಹಿಂದಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪರಿಶ್ರಮವೇ ಮುಖ್ಯ ಕಾರಣವಾಗಿದೆ. ಅವರ ಶ್ರಮ, ಸಂಘಟನಾ ಶಕ್ತಿ ಮತ್ತು ಬೆಳೆಗಾರರ ಏಕತೆಯಿಂದಲೇ ಸಂಘ ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು. ಮುಂದೆಯೂ ಸಹ ಬೆಳೆಗಾರರ ಹಿತಾಸಕ್ತಿಗಾಗಿ ಸಂಘ ಬದ್ಧವಾಗಿ ಕೆಲಸ ಮಾಡಲಿದೆ ಎಂದು ಅಧ್ಯಕ್ಷರು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್. ಶಂಕರ್ ಮಾತನಾಡಿ ಮಾನವ–ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಅಗತ್ಯ. ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದ್ದು, ಇದಕ್ಕೆ ಸಮತೋಲನ ಸಾಧಿಸುವ ರೀತಿಯಲ್ಲಿ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು ಎಂದರು. ಸಸ್ಯಹಾರಿ ಮತ್ತು ಮಾಂಸಹಾರಿ ಪ್ರಾಣಿಗಳಿಗೆ ಅರಣ್ಯ ಇಲಾಖೆಯ ಪ್ರದೇಶದಲ್ಲಿ ಆಹಾರದ ಕೊರತೆ ಎದ್ದು ಕಾಣುತ್ತಿದೆ. ಆದ್ದರಿಂದಲೇ ನಾಡಿನತ್ತ ಕಾಡಾನೆ ಸೇರಿದಂತೆ ನವಿಲು, ಚಿರತೆ, ಕಾಡುಕೋಣ, ಕಾಡು ಎಮ್ಮೆ ಎಲ್ಲಾ ರೀತಿಯ ಪ್ರಾಣಿಗಳು ಬರುತ್ತಿವೆ. ಪ್ರಾಣಿಗಳು ತಮ್ಮ ವಾಸಸ್ಥಾನವನ್ನು ಕಳೆದುಕೊಳ್ಳುತ್ತಿವೆ. ಸರ್ಕಾರಗಳು ಬೆಳೆಗಾರರ ಜೊತೆಗೆ ನಿಂತು ಸಹಕಾರಿಸಬೇಕು ಎಂದರು.
ಸರ್ಕಾರವು ಕಾಫಿ ಬೆಳೆದಿರುವ ಪ್ರದೇಶಗಳನ್ನು 30 ವರ್ಷಗಳ ಕಾಲ ಲೀಸ್ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದೆ. ಪ್ರಾರಂಭಿಕ ಹಂತದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಚಿಕ್ಕಮಗಳೂರು ತಾಲೂಕುಗಳ ಎರಡು ಹೋಬಳಿಗಳಲ್ಲಿ ದಾಖಲೆ ಪರಿಶೀಲನೆ ಕಾರ್ಯ ಪ್ರಾರಂಭಿಸಲಾಗಿದೆ. ಅಲ್ಲಿ ಬೆಳೆಗಾರರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ, ಎಷ್ಟು ವರ್ಷಗಳಿಂದ ಬೆಳೆ ಮಾಡುತ್ತಿದ್ದಾರೆ ಎಂಬ ಎಲ್ಲಾ ಮಾಹಿತಿಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಈ ಪ್ರಕ್ರಿಯೆ ನಂತರ ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿಯೂ ವಿಸ್ತರಿಸಲಾಗುವುದು ಎಂದು ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಸರ್ಕಾರ ಕೈಗೊಂಡಿರುವ 30 ವರ್ಷಗಳ ಲೀಸ್ ತೀರ್ಮಾನದಲ್ಲಿ ಭಿನ್ನಾಭಿಪ್ರಾಯ ಇಲ್ಲ. ಎಲ್ಲಾ ಪಕ್ಷಗಳು ಸೇರಿ ತೆಗೆದುಕೊಂಡಿರುವ ಈ ತೀರ್ಮಾನ ನೂರಕ್ಕೆ ನೂರು ಜಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು, ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರ ಕೊರತೆ ಉಂಟಾದಾಗ ಅವು ಬೆಳೆ ಪ್ರದೇಶಗಳತ್ತ ಬರುತ್ತವೆ. ವಿಶೇಷವಾಗಿ ಆನೆಗಳಿಗೆ ಸಂಚರಿಸಲು ಸಮರ್ಪಕ ದಾರಿಗಳು ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಸಕಲೇಶಪುರ, ಬೇಲೂರು ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ನೂರಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಹಾಗೂ ಭದ್ರತಾ ವ್ಯವಸ್ಥೆ ಅಗತ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು, ಕಾಫಿ ಬೆಳೆಗಾರರು, ಸಂಘದ ಕಾರ್ಯದರ್ಶಿ ಸಂಜಯ್ ಕೌರಿ ಸೇರಿದಂತೆ ಸದಸ್ಯರು ಬೆಳೆಗಾರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.