ಕನ್ನಡಪ್ರಭ ವಾರ್ತೆ ಮದ್ದೂರು
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಇವರು ಎರಡು ವರ್ಷದಲ್ಲಿ ಯಾವ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಇವರ ಸಾಧನೆ ಏನು ಎಂಬುದನ್ನು ಸಾಬೀತು ಪಡಿಸಲಿ. ಯಾವ ಕೈಗಾರಿಕೆ ತರಲಾಗದಿದ್ದರೂ ರಾಜ್ಯ ಸರ್ಕಾರ ಜಮೀನು ಕೊಡುತ್ತಿಲ್ಲ. ಇಲ್ಲವೇ ಜನಪ್ರತಿನಿಧಿಗಳು ಸಹಕರಿಸುತ್ತಿಲ್ಲವೆಂದು ಗೂಬೆ ಕೂರಿಸುವುದು. ಎಲ್ಲೋ ನಿಂತು ಮಾಧ್ಯಮಗಳಿಗೆ ಹೇಳಿ ಪಲಾಯನ ಮಾಡುವುದೇ ಇವರ ಸಾಧನೆಯಾಗಿದೆ ಎಂದು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೂದಲಿಸಿದರು.
ಜಿಲ್ಲೆಗೆ ಮತ್ತು ಜಿಲ್ಲೆಯ ರೈತರಿಗೆ ಇವರ ಕೊಡುಗೆ ಏನು?, ಬಸ್ ಶೆಲ್ಟರ್ ಮಾಡಿ ಬೋರ್ಡ್ ಹಾಕಿದರೆ ಅದು ಅಭಿವೃದ್ಧಿಯೇ, ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಇವರು ಏನೆಲ್ಲಾ ಯೋಜನೆ ತಂದಿದ್ದಾರೆ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಪಂ ಸೇರಿದಂತೆ ನಾಲ್ಕು ಗ್ರಾಮಗಳನ್ನು ಸೇರಿಸಿದ್ದೇವೆ. ಅದರಲ್ಲೇನು ತಪ್ಪು? ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ಪಂಚಾಯ್ತಿಯವರು ನಿರ್ಣಯ ಮಾಡಿದ್ದಾರೆ. ಮದ್ದೂರು ಅಭಿವೃದ್ಧಿ ಆಗುವುದು ಬೇಡವೇ?, ಅಭಿವೃದ್ಧಿಯನ್ನು ಸಹಿಸದೆ ಇಲ್ಲ ಸಲ್ಲದ್ದು ಹೇಳುವುದನ್ನು ಮೊದಲು ಬಿಡಿ ಎಂದು ಸಲಹೆ ನೀಡಿದರು.
ನಾನು ಆಯ್ಕೆಯಾದರೆ ಕೇವಲ ಐದೇ ನಿಮಿಷದಲ್ಲಿ ಪ್ರಧಾನಿ ಬಳಿ ಕುಳಿತುಕೊಂಡು ಮೇಕೆದಾಟು ಯೋಜನೆಗೆ ಅನುಮೋದನೆ ಕೊಡಿಸುತ್ತೇನೆ ಎಂದಿದ್ದರು. ಏಕೆ ಮಾಡಲಾಗಲಿಲ್ಲ. ಇವರಿಂದ ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಮೂಲಕವೇ ಆದೇಶ ಮಾಡಿಸಲು ಮುಂದಾಗಿದ್ದಾರೆ ಎಂದರು.
ಅಭಿವೃದ್ಧಿಗೆ ಹೋರಾಟ ಮಾಡಲಿ, ಅದು ಬಿಟ್ಟು ಅಭಿವೃದ್ಧಿ ಮಾಡುವುದನ್ನು ಸಹಿಸದೆ ಹೋರಾಟ ಮಾಡುವುದು ಯಾವ ನ್ಯಾಯ, ಕೆ.ಆರ್.ಎಸ್.ನಲ್ಲಿ ಗಂಗಾರತಿ ಮಾಡುತ್ತೇವೆ ಎಂದರೆ ಬೇಡ ಎನ್ನುತ್ತೀರಿ, ಪ್ರವಾಸೋಧ್ಯಮ ಅಭಿವೃದ್ಧಿಗೆ ಹೊಸ ಯೋಜನೆ ಮಾಡಿದರೆ ಅದರ ವಿರುದ್ಧ ಹೋರಾಟ ಮಾಡುತ್ತೀರಿ. ಕೆ.ಆರ್.ಎಸ್.ನಲ್ಲಿ ಪಾರ್ಕ್ ಪ್ರಾರಂಭ ಆದರೆ ಜಿಲ್ಲೆಯ ಸಾವಿರಾರು ಮಂದಿಗೆ ಉದ್ಯೋಗ ಸಿಗುತ್ತೆ. ಜಿಲ್ಲೆಯ ಜನರ ಜೀವನಕ್ಕೆ ಅನುಕೂಲ ಆಗುತ್ತೆ. ಅದಕ್ಕೂ ಹೋರಾಟ ಮಾಡುತ್ತೇನೆ ಎನ್ನುತ್ತೀರಿ ಎಂದು ಛೇಡಿಸಿದರು.
ರಾಜಕೀಯ ನನಗೆ ಬದುಕಲ್ಲ. ನನಗೆ ಶಾಸಕರು, ಮಂತ್ರಿಗಿರಿಯ ಅವಶ್ಯಕತೆ ಇಲ್ಲ. ಜನ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಜನರ ಆಸೆ ಈಡೇರಿಸಲು ಕೆಲಸ ಮಾಡುತ್ತಿದ್ದೇನೆ. ಮದ್ದೂರು ಪಟ್ಟಣ ಅಭಿವೃದ್ಧಿಯಾಗಬಾರದೇ ಎಂದು ಪ್ರಶ್ನಿಸಿದರು.