ಬೆಂಗಳೂರು ಕಂಬಳದಲ್ಲಿ 200 ಜೊತೆ ಕೋಣಗಳ ಸ್ಪರ್ಧೆ

KannadaprabhaNewsNetwork |  
Published : Nov 23, 2023, 01:45 AM IST
ಬೆಂಗಳೂರಲ್ಲಿ ಕಂಬಳ | Kannada Prabha

ಸಾರಾಂಶ

ಬೆಂಗಳೂರು ಕಂಬಳದಲ್ಲಿ ೨೦೦ ಜೋಡಿ ಕೋಣಗಳ ಸ್ಪರ್ಧೆ, ಸುಮಾರು ೩ ಲಕ್ಷ ಜನರು ಆಗಮಿಸುವ ನಿರೀಕ್ಷೆ, ಕಂಬಳಕ್ಕೆ ಅರಮನೆ ಮೈದಾನದಲ್ಲಿ ಭರದ ಸಿದ್ಧತೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಅರಮನೆ ಮೈದಾನದಲ್ಲಿ ನ.25 ಮತ್ತು 26ರಂದು ನಡೆಯಲಿರುವ "ಬೆಂಗಳೂರು ಕಂಬಳ " ಉತ್ಸವದಲ್ಲಿ 200 ಜೊತೆ ಕೋಣಗಳು ಭಾಗವಹಿಸಲಿದ್ದು, ಸುಮಾರು 2-3 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ.

ಕರಾವಳಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಹುಲಿ ವೇಷದ ನೃತ್ಯ, ಸಂಸ್ಕೃತಿ, ಕಲೆಗಳ ಪ್ರದರ್ಶನ, ಚಿತ್ರ ಮತ್ತು ಗೊಂಬೆ ಪ್ರದರ್ಶನ, ಇರಲಿದೆ. ಕರಾವಳಿಯ ವಿಶೇಷ ತಿಂಡಿ-ತಿನಿಸುಗಳ 80 ಸ್ಟಾಲ್‌ಗಳು ಇರಲಿವೆ.

ಪ್ರಥಮ ಬೆಂಗಳೂರು ಕಂಬಳ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕಂಬಳ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, "ಅತ್ಯಂತ ವಿಜ್ರಂಭಣೆಯಿಂದ ಕಂಬಳ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುರುವಾರ ಉಪ್ಪಿನಂಗಡಿಯಿಂದ ಕೋಣಗಳು ಹೊರಡುತ್ತವೆ. ಮಾರ್ಗ ಮಧ್ಯೆ ಹಾಸನದಲ್ಲಿ ಶಾಸಕ ಎಚ್.ಡಿ. ರೇವಣ್ಣ ಅವರು ಕೋಣಗಳು, ಮಾಲೀಕರಿಗೆ ಊಟ, ಊಪಹಾರ ವಿಶ್ರಾಂತಿ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿಂದ ಮೆರವಣಿಗೆಯಲ್ಲಿ ಕೋಣಗಳನ್ನು ಕರೆತರಲಾಗುತ್ತದೆ. ಪಕ್ಷಾತೀತವಾಗಿ ಕಂಬಳ ಆಯೋಜನೆಯಾಗಿದ್ದು, ಕರಾವಳಿ ಭಾಗದ ಸುಮಾರು 69 ಸಂಘಟನೆಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಸುಮಾರು 18 ಲಕ್ಷ ಜನರ ಸಂಕಲ್ಪವಾಗಿದೆ " ಎಂದರು.

"ಸುಮಾರು 700 ವರ್ಷಗಳ ಇತಿಹಾಸ ಇರುವ ಕಂಬಳವನ್ನು ಇಡೀ ದೇಶಕ್ಕೆ ಪರಿಚಯಿಸಲು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಅರಮನೆ ಮೈದಾನದಲ್ಲಿ ಸಿದ್ಧಪಡಿಸಲಾಗಿರುವ 150 ಮೀಟರ್ ಉದ್ದದ ಕರೆ (ಟ್ರ್ಯಾಕ್) ಅತ್ಯುತ್ತಮ ಕರೆ ಎಂಬ ಪ್ರಮಾಣಪತ್ರ ಪಡೆದಿದೆ. 600 ಜನ ಕುಳಿತುಕೊಂಡು ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕಾರ್ಯಕ್ರಮಕ್ಕೆ ಆರೇಳು ಕೋಟಿ ರೂ. ಖರ್ಚಾಗುತ್ತಿದೆ. ಸರ್ಕಾರದಿಂದ 1 ಕೋಟಿ ರೂ. ನೆರವಿನ ಭರವಸೆ ಸಿಕ್ಕಿದೆ " ಎಂದು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದರು.

ಸುದೀಪ್, ಶಿವಣ್ಣ ಉಪ್ಪಿ ಸೇರಿ ಅನೇಕ ತಾರೆಯರ ಆಗಮನ

ನಟರಾದ ಸುದೀಪ್, ಉಪೇಂದ್ರ, ಶಿವರಾಜ್‌ಕುಮಾರ್‌, ಅನುಷ್ಕಾ ಶೆಟ್ಟಿ, ದಿ. ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಸಿನಿಮಾ ರಂಗದ ಅನೇಕರು ಕಂಬಳ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು.

ಪುನೀತ್ ವೇದಿಕೆ

ವೇದಿಕೆಗೆ ಪುನೀತ್ ರಾಜ್‌ಕುಮಾರ್ ವೇದಿಕೆ, ಸ್ಪರ್ಧೆ ನಡೆಯುವ ಕರೆಗೆ ರಾಜ ಮಹಾರಾಜ ಕರೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಮತ್ತೊಂದು ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡಲಾಗಿದೆ.

ಬಹುಮಾನ

ಪ್ರಥಮ ಬಹುಮಾನ - 1 ಲಕ್ಷ ರೂ. ಮತ್ತು 16 ಗ್ರಾಂ ಚಿನ್ನ

2ನೇ ಬಹುಮಾನ - 50,000 ರೂ. ಮತ್ತು 8 ಗ್ರಾಂ ಚಿನ್ನ

3ನೇ ಬಹುಮಾನ - 25,000 ರೂ. ಮತ್ತು 4 ಗ್ರಾಂ ಚಿನ್ನ

ಭರದ ಸಿದ್ಧತೆ

ಕಂಬಳ ಕಾರ್ಯಕ್ರಮಕ್ಕೆ ನಗರದ ಅರಮನೆ ಮೈದಾನ ಸಜ್ಜಾಗುತ್ತಿದ್ದು, ವೇದಿಕೆ, ಗ್ಯಾಲರಿ, ಕುರ್ಚಿ ವ್ಯವಸ್ಥೆ, ಪಾರ್ಕಿಂಗ್, ಕಾರ್ಯಕ್ರಮಕ್ಕೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗುತ್ತಿದೆ. ಬುಧವಾರದಿಂದ ಕರೆಯಲ್ಲಿ ಕೋಣಗಳ ಓಟದ ತಾಲೀಮು ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಕ್ತಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ, ರಕ್ತದಾನ ಅತ್ಯಂತ ಶ್ರೇಷ್ಠ: ಸಂಜೀವ್ ಕುಮಾರ್
ಅಗಳಗಂಡಿ ಪಂಚಾಯ್ತಿ ಕಾರೆಮನೆ ದಲಿತ ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸಿ