ಹುಮನಾಬಾದ್‌ ಕೈಗಾರಿಕಾ ಪ್ರದೇಶದಲ್ಲಿನ 3 ವಿಷಕಾರಿ ಕಾರ್ಖಾನೆ ಬಂದ್‌ಗೆ ಆದೇಶ : ಜಿಲ್ಲಾಡಳಿತ ಮೌನ

KannadaprabhaNewsNetwork | Updated : Aug 29 2024, 01:08 PM IST

ಸಾರಾಂಶ

ಆದೇಶ ಹೊರಡಿಸಿದ್ದರೂ ಅದರ ಪರಿಪಾಲನೆಗೆ ಜಿಲ್ಲಾಡಳಿತ ಮೌನವಾಗಿದ್ದದ್ದು ಸದರಿ ಕಾರ್ಖಾನೆಗಳ ಕಳ್ಳಾಟಕ್ಕೆ, ಕತ್ತಲಲ್ಲಿ ಕಾರ್ಖಾನೆ ನಡೆಸಲು ಪರೋಕ್ಷ ಪರವಾನಗಿ ನೀಡಿದಂತಾಗಿದೆ.

  ಹುಮನಾಬಾದ್‌ :  ಪರಿಸರ ಹಾಗೂ ಜನ ಜೀವಕ್ಕೆ ಹಾನಿಯುಂಟು ಮಾಡುತ್ತಿರುವ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿನ ಮೂರು ಟೈರ್‌ ಪೈರೋಲಿಸಿಸ್‌ ಹಾಗೂ ನಾಲ್ಕು ಔಷಧಿಯ ಕಾರ್ಖಾನೆಗಳನ್ನು ಮುಚ್ಚುವ ಆದೇಶ ಹೊರಬಿದ್ದು ತಿಂಗಳುಗಳು ಉರುಳಿದ್ದರೂ ಜಿಲ್ಲಾಡಳಿತ ಮೂಕಪ್ರೇಕ್ಷಕನಂತಿರುವಾಗಲೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮತ್ತೇ ಮೂರು ಔಷಧಿ ಕಾರ್ಖಾನೆಗಳಿಗೆ ಬೀಗ ಜಡಿಯುವ ಆದೇಶ ನೀಡಿದ್ದು ಯಾವ ಸಾರ್ಥಕತೆಗಾಗಿ ಎಂಬ ಪ್ರಶ್ನೆ ಭುಗಿಲೆದ್ದಿದೆ.

ಹುಮನಾಬಾದ್‌ ಕೈಗಾರಿಕಾ ಪ್ರದೇಶದಲ್ಲಿನ 5 ಟೈರ್‌ ಪೈರೋಲಿಸಿಸ್‌, 4 ಔಷಧಿ ಕಾರ್ಖಾನೆಗಳನ್ನು ಮುಚ್ಚಲು ಜುಲೈ 23ರಂದೇ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದ್ದರೂ ಅದರ ಪರಿಪಾಲನೆಗೆ ಜಿಲ್ಲಾಡಳಿತ ಮೌನವಾಗಿದ್ದದ್ದು ಸದರಿ ಕಾರ್ಖಾನೆಗಳ ಕಳ್ಳಾಟಕ್ಕೆ, ಕತ್ತಲಲ್ಲಿ ಕಾರ್ಖಾನೆ ನಡೆಸಲು ಪರೋಕ್ಷ ಪರವಾನಗಿ ನೀಡಿದಂತಾಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನೀರಿನ ಸೆಕ್ಷನ್‌ 33 (ಎ) ಅಡಿಯಲ್ಲಿ, ಕಾಯಿದೆ 1974, 1976 ಕರ್ನಾಟಕ ಮಂಡಳಿಯ ನಿಯಮ 34, ಜಲ ಕಾಯಿದೆ, 1974 ಏರ್‌ ಆಕ್ಟ್‌ 1981 ಅಡಿಯಲ್ಲಿ ಝಡ್‌.ಎಸ್‌.ಇ.ಒ ಕಲಬುರಗಿ, ಜುಲೈ 2023 ಹೊರಡಿಸಿದ ನಿಷೇಧಾಜ್ಞೆ, ಮಾರ್ಚ್‌ 2024ರಂದು ನಡೆದ ವೈಯಕ್ತಿಕ ವಿಚಾರಣೆಯ ಪ್ರಕ್ರಿಯೆಗಳು. ಆರ್‌.ಒ ಬೀದರ್ ತಪಾಸಣೆ ವರದಿ, ಪ್ರಧಾನ ಕಚೇರಿಯಲ್ಲಿ ಸಲ್ಲಿಸಿದ ವರದಿಯಂತೆ, ನಿಗದಿಪಡಿಸಿದ ಮಾನದಂಡ ಮೀರಿ ನಿಯಮಗಳನ್ನು ಉಲ್ಲಂಘಿಸಿ ಕಾರ್ಖಾನೆಯು ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸುವ ಬದಲು ಹಳ್ಳಗಳ ಮೂಲಕ ಹರಿದು ಬಿಡುವುದು ಇದರಿಂದ ಕೊಳವೆಬಾವಿಗಳು, ತೆರೆದ ಬಾವಿಗಳ ಅಂತರ್ಜಲಕ್ಕೆ ಅಪಾಯವನ್ನುಂಟು ಮಾಡುವುದು ಸ್ಪಷ್ಟವಾಗಿ ಧೃಡಪಟ್ಟಿತ್ತು.

ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ಸಂಗ್ರಹವಾಗಿರುವ ತ್ಯಾಜ್ಯನೀರಿನ ಟಿಡಿಎಲ್‌, ಬಿಒಡಿ ಮತ್ತು ಸಿಒಡಿ ಸಂಸ್ಕರಿಸಿದ ಹೊರ ಸೂಸುವಿಕೆಯ ಮಾನದಂಡಗಳನ್ನು ಮೀರಿದೆ ಎನ್ನುವ ಕುರಿತು ಪರಿಶೀಲಿಸಿದ ನಂತರ ಅಗಸ್ಟ್‌ 17ರಂದು ಸತ್ಯದೀಪ್ತಾ ಫಾರ್ಮಾಸ್ಯುಟಿಕಲ್, ವಿರುಪಾಕ್ಷ ಫಾರ್ಮಾ ಹಾಗೂ ರಾಡಿಸನ್‌ ಲ್ಯಾಬ್‌ ಮುಚ್ಚುವ ಆದೇಶ ನೀಡಲಾಗಿದ್ದು ಇದೀಗ ಬೆಳಕಿಗೆ ಬಂದಿದೆ.

ಕಳೆದ ಜುಲೈ 23ರಂದು ನಿಯಮ ಉಲ್ಲಂಘಸಿದ್ದ ಪೈನರ್‌, ನ್ಯೂ ಹಿಮಾಲಯ, 6ಎಚ್‌, ಎಂಕೆ, ಕೆಜಿಎನ್ ಟೈರ್‌ ಪೈರೋಲಿಸಿಸ್‌, ಸ್ವಿಟಿಕ್‌ ಫಾರ್ಮಾದ ಎರಡು ಘಟಕ, ಕೆಎಸ್‌ಟಿ ಫಾರ್ಮಾ, ಕ್ಷತ್ರೀಯ ಲ್ಯಾಬೋರಟರಿ ಹೀಗೇ 4 ರಾಸಾಯನಿಕ ಸೇರಿದಂತೆ ಒಟ್ಟು 9 ಕಾರ್ಖಾನೆಗಳನ್ನು ಮುಚ್ಚುವ ಆದೇಶ ನೀಡಲಾಗಿತ್ತು. ಸದ್ಯ ವಿದ್ಯುತ್ ಕಡಿತಗೊಳಿಸಿದ್ದರೂ ಕೆಲ ಕಾರ್ಖಾನೆಗಳು ಕಳ್ಳಾಟಕ್ಕೆ ಇಳಿದು ಇನ್ನೂ ಕಾರ್ಖಾನೆಗಳನ್ನು ಚಾಲ್ತಿಯಲ್ಲಿಟ್ಟಿವೆ. ಇದೀಗ ಸತ್ಯದೀಪ್ತಾ ಫಾರ್ಮಾಸ್ಯುಟಿಕಲ್‌, ವಿರುಪಾಕ್ಷ ಫಾರ್ಮಾ ಹಾಗೂ ರಾಡಿಸನ್‌ ಲ್ಯಾಬ್ ಇವುಗಳನ್ನು ಮುಚ್ಚುವ ಆದೇಶ ನೀಡಲಾಗಿದ್ದು, ಹೀಗಾಗಿ 7 ಫಾರ್ಮಾ ಹಾಗೂ 5 ಟೈರ್‌ ಪೈರೋಲಿಸಿಸ್‌ ಕಾರ್ಖಾನೆಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದ್ದು ಇದರ ಪರಿಪಾಲನೆಗೆ ಜಿಲ್ಲಾಡಳಿತ, ಜೆಸ್ಕಾಂಗೆ ಸೂಚಿಸಲಾಗಿದೆ.

ಸದ್ಯ ವಿದ್ಯುತ್‌ ಸಂಪರ್ಕ ಮಾತ್ರ ಕಡಿತಗೊಳಿಸಲಾಗಿದ್ದರೂ ಕಳ್ಳಾಟದಿಂದ ಕಾರ್ಖಾನೆಗಳು ನಡೆದಿದ್ದು ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಹೊಸದಾಗಿ ಹೊರಡಿಸಲಾಗಿದ್ದು ಕಾರ್ಖಾನೆಯ ಮುಚ್ಚುವ ಆದೇಶಕ್ಕೆ ಯಾವ ಬೆಲೆಯನ್ನು ಜಿಲ್ಲಾಡಳಿತ ನೀಡುತ್ತೇ, ಪರಿಸರ ಖಾತೆಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ನಡೆ ಏನಿರುತ್ತೆ ಎಂಬುವದನ್ನು ಸಧ್ಯ ಕಾದು ನೋಡಬೇಕಿದೆ.

Share this article