ಹಗರಿಬೊಮ್ಮನಹಳ್ಳಿ: ಪಟ್ಟಣದ ಬನಶಂಕರಿ ದೇಗುಲದ ಹಾಗೂ ದೇವಾಂಗ ಸಮಾಜದ ಧಾರ್ಮಿಕ ಕಾರ್ಯಕ್ರಮಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಈ ವರ್ಷಾಂತ್ಯದೊಳಗೆ ₹೩೦ ಲಕ್ಷ ಅನುದಾನ ಒದಗಿಸಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ಶಾಸಕ ನೇಮಿರಾಜ್ ನಾಯ್ಕ ಭರವಸೆ ನೀಡಿದರು.
ಕೆಕೆಆರ್‌ಡಿಬಿ ಅಥವಾ ಬೇರೆ ಯಾವುದಾದರೂ ಅನುದಾನ ಒದಗಿಸಲು ಸಮುದಾಯ ಭವನ ನಿವೇಶನದ ಇ-ಸ್ವತ್ತು ತೀರಾ ಅಗತ್ಯವಾಗಿದೆ. ಸಿದ್ಧಪಡಿಸಿಕೊಳ್ಳಿ ಎಂದು ಪದಾಧಿಕಾರಿಗಳಿಗೆ ಸೂಚಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಐಎಎಸ್ ಅಧಿಕಾರಿಗಳಿಗೆ ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಅರಿವು ಇರುವುದಿಲ್ಲ. ಇಲ್ಲಿ ಅಧಿಕಾರಿಗಳದ್ದೇ ಕಾರುಬಾರಾಗಿದೆ. ಮಂಡಳಿ ವ್ಯಾಪ್ತಿಯ ೪೧ ವಿಧಾನಸಭಾ ಕ್ಷೇತ್ರಗಳ ಎಲ್ಲ ಶಾಸಕರನ್ನು ಈವರೆಗೂ ಪಕ್ಷಾತೀತವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ದೂರಿದರು.ಮಂಡಳಿಯಲ್ಲಿ ಬರೀ ಕಾಂಗ್ರೆಸ್ ಶಾಸಕರೇ ತುಂಬಿಕೊಂಡಿದ್ದಾರೆ. ಪರಿಣಾಮವಾಗಿ ಜೆಡಿಎಸ್, ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಅನುದಾನವಿಲ್ಲದೇ ಅಭಿವೃದ್ಧಿಯಿಂದ ವಂಚಿತವಾಗಿವೆ. ಈ ಕುರಿತು ತಾವು ಮುಖ್ಯಮಂತ್ರಿಗೆ ಆಕ್ಷೇಪಣೆ ಸಲ್ಲಿಸಿರುವುದಾಗಿ ತಿಳಿಸಿದರು.
ಪುರಸಭೆ ಸದಸ್ಯರಾದ ದೀಪಕ್ ಕಠಾರೆ, ಅಂಬಳಿ ಮಂಗಳಗೌರಮ್ಮ, ಅಂಬಳಿ ರವೀಂದ್ರಗೌಡ, ಜಿ.ಎಂ. ಜಗದೀಶ್, ಈ.ಕೃಷ್ಣಮೂರ್ತಿ, ಚಿತವಾಡಗಿ ಪ್ರಕಾಶ್, ಬಿಸ್ನಳ್ಳಿ ಬಸವರಾಜ್, ಟ್ರಸ್ಟ್ ಅಧ್ಯಕ್ಷ ನೇಗಿಗೌಡ್ರು ವಿರೂಪಾಕ್ಷಪ್ಪ, ಉಪಾಧ್ಯಕ್ಷ ಜಿ.ಚನ್ನಬಸವಗೌಡ, ಎಸ್.ಶಂಕರಾನಂದ್ ಹಾಗೂ ಟ್ರಸ್ಟ್ ಮತ್ತು ರಾಘವೇಂದ್ರ ಪಾದಯಾತ್ರೆ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.