ಪ್ರತಿವರ್ಷ ದೇಶದಲ್ಲಿ ಹೃದಯಾಘಾತದಿಂದ 30 ಲಕ್ಷ ಮಂದಿ ಸಾವು

KannadaprabhaNewsNetwork |  
Published : Sep 16, 2025, 12:03 AM IST
ಚನ್ನರಾಯಪಟ್ಟಣದ ಗಣಪತಿ ಪೆಂಡಾಲಿನಲ್ಲಿ ನಿರ್ಮಾಣವಾಗಿರುವ ಧರ್ಮಸ್ಥಳದಲ್ಲಿ ನಮ್ಮೂರ ಗಣಪ ಮಂಟಪವನ್ನು ಉದ್ಘಾಟಿಸಿ ಸಂಸದ ಸಿ. ಎನ್​. ಮಂಜುನಾಥ್ ಮಾತನಾಡಿದರು. | Kannada Prabha

ಸಾರಾಂಶ

ಹೃದಯಾಘಾತ ಪ್ರಕರಣಗಳು ಕೇವಲ ಹಾಸನಕ್ಕೆ ಮಾತ್ರ ಸೀಮಿತವಾಗದೆ ಭಾರತದಲ್ಲಿ ಸುಮಾರು 30 ಲಕ್ಷ ಮಂದಿ ಪ್ರತಿ ವರ್ಷ ಸಾವಿಗೀಡಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಇತ್ತೀಚೆಗೆ ನಡೆದ ಹೃದಯಾಘಾತ ಪ್ರಕರಣಗಳು ಕೇವಲ ಹಾಸನಕ್ಕೆ ಮಾತ್ರ ಸೀಮಿತವಾಗದೆ, ಭಾರತದಲ್ಲಿ ಸುಮಾರು 30 ಲಕ್ಷ ಮಂದಿ ಪ್ರತಿ ವರ್ಷ ಸಾವಿಗೀಡಾಗುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಬೆಂಗಳೂರು ಗ್ರಾಮಾಂತರ ಸಂಸದ ಸಿ. ಎನ್​. ಮಂಜುನಾಥ್ ಹೇಳಿದ್ದಾರೆ.

ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ನಿರ್ಮಾಣವಾಗಿರುವ ಧರ್ಮಸ್ಥಳದಲ್ಲಿ ನಮ್ಮೂರ ಗಣಪ ಮಂಟಪವನ್ನು ಉದ್ಘಾಟಿಸಿ ಮಾತನಾಡಿ, ಹೃದಯಾಘಾತ ಪ್ರಕರಣಗಳು ಕೇವಲ ಹಾಸನಕ್ಕೆ ಮಾತ್ರ ಸೀಮಿತವಾಗದೆ ಭಾರತದಲ್ಲಿ ಸುಮಾರು 30 ಲಕ್ಷ ಮಂದಿ ಪ್ರತಿ ವರ್ಷ ಸಾವಿಗೀಡಾಗುತ್ತಿದ್ದಾರೆ. ಮಾನಸಿಕ ಒತ್ತಡ ಅವರ ಜೀವನಶೈಲಿ ಕ್ರಮಗಳು ಮತ್ತು ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳಿಂದ ಸ್ವಯಂ ಪ್ರೇರಿತವಾಗಿ ಅವರು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.ಇವತ್ತು ದೇಶದಲ್ಲಿ ಯಾರೂ ಮದ್ಯಪಾನ ಮಾಡದವರು ಎಂಬುದನ್ನು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಧೂಮಪಾನ ಮತ್ತು ಮದ್ಯಪಾನ ಹೃದಯಾಘಾತಕ್ಕೆ ಕಾರಣವಾಗಿದೆ. ಹಾಗೆ ಒತ್ತಡಗಳ ನಡುವೆ ಐಷಾರಾಮಿ ಜೀವನ ನಡೆಸುತ್ತಿರುವುದು, ಮತ್ತು ಮಾನಸಿಕ ಖಿನ್ನತೆಯಿಂದ ಮಾನವನ ದೇಹ ಸಡಿಲಿಕೆಯಾಗಿ ಉಸಿರಾಟಕ್ಕೆ ತೊಂದರೆ ಉಂಟಾಗುತ್ತಿದೆ. ಭಾರತ ದೇಶದಲ್ಲಿ ಸುಮಾರು 60ರಷ್ಟು ಸಾವುಗಳು ಜೀವನ ಶೈಲಿಯ ಆಧಾರಿತ ಕಾಯಿಲೆಗಳಿಂದ ಸಂಭವಿಸುತ್ತಿವೆ. ಹೀಗಾಗಿ ಮದ್ಯಪಾನ ಮತ್ತು ಧೂಮಪಾನವನ್ನು ನಿಲ್ಲಿಸಿ ಪ್ರತಿನಿತ್ಯ ಯೋಗಾಸನ ಮತ್ತು ವ್ಯಾಯಾಮವನ್ನು ಪ್ರಾರಂಭಿಸಿ ಎಂದು ನಾಗರಿಕರಿಗೆ ಕಿವಿಮಾತು ಹೇಳಿದರು.ವರ್ಷಕ್ಕೆ 4.50 ಲಕ್ಷ ರಸ್ತೆ ಅಪಘಾತ:

ಭಾರತ ದೇಶದಲ್ಲಿ ವರ್ಷಕ್ಕೆ ನಾಲ್ಕೂವರೆ ಲಕ್ಷ ರಸ್ತೆ ಅಪಘಾತಗಳಾಗುತ್ತಿದ್ದು, ಸುಮಾರು 1 ಲಕ್ಷದಷ್ಟು ಜನತೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ 2014ರ ತನಕ 80 ಸಾವಿರ ಉದ್ಧದ ರಸ್ತೆಗಳಿದ್ದವು. ಆದರೆ, ಕಳೆದ ಹತ್ತು ವರ್ಷಗಳಲ್ಲಿ 1.40 ಲಕ್ಷ ಕಿ.ಮೀ. ಉದ್ದದ ಎಕ್ಸ್‌ಪ್ರೆಸ್​ವೇ ಆಗಿರುವುದು ಮೋದಿ ಸರ್ಕಾರದ ಬಹುದೊಡ್ಡ ಕೊಡುಗೆ. ಕಳೆದ 10 ವರ್ಷಗಳಲ್ಲಿ ರೈಲು ಮತ್ತು ರಸ್ತೆ ಸಾರಿಗೆಗಳು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇನ್ನು ದೇಶದಲ್ಲಿ ಆಗುತ್ತಿರುವ ಅಪಘಾತಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿಗಳ ಗಮನವನ್ನು ಸೆಳೆಯುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಯಾವ ಯಾವ ರಸ್ತೆಗಳಲ್ಲಿ ಅಪಘಾತ ಸಂಭವಿಸುತ್ತದೆ ಎಂಬುದನ್ನು ಗುರುತು ಮಾಡಿ, ಅದನ್ನು ಬ್ಲಾಕ್ ಸ್ಪಾಟ್ ಎಂದು ಹೆಸರಿಟ್ಟು, ರಾಷ್ಟ್ರದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಕೇವಲ ಹಮ್ಸ್ ನಿರ್ಮಾಣವಷ್ಟೇ ಅಲ್ಲದೆ, ಸೀರಿಯಲ್ ಹಮ್ಸ್ ಕೂಡ ಹಾಕುವಲ್ಲಿ ಕ್ರಮವಹಿಸಿದೆ ಎಂದು ಸಂಸದರು ತಿಳಿಸಿದರು.ಗಣೇಶೋತ್ಸವ ಮೆರವಣಿಗೆ ದುರಂತ:

ಗಣೇಶ ಉತ್ಸವ ಮತ್ತು ಇತರ ಮೆರವಣಿಗೆ ಸಂದರ್ಭದಲ್ಲಿ ವಾಹನ ಚಾಲಕರು ಮತ್ತು ಸವಾರರು ಆ ಭಾಗದಲ್ಲಿ ಮಂದಗತಿಯಲ್ಲಿ ಸಾಗಬೇಕು. ಕೆಲವರು ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವುದರಿಂದ ಇಂತಹ ಅಪಘಾತಗಳು ಸಂಭವಿಸುತ್ತವೆ. ಹಾಗಾಗಿ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ಪೊಲೀಸರು ಮುನ್ನೆಚ್ಚರಿಕ ವಹಿಸಬೇಕಾಗಿರುವುದು ಅತಿ ಮುಖ್ಯವಾಗಿದೆ. ದೇಶದಲ್ಲಿ ಔಷಧಿ ಅಂಗಡಿಗಳಿಗಿಂತ ಅಧಿಕ ಮದ್ಯಪಾನ ಧೂಮಪಾನದ ಅಂಗಡಿಗಳು ಹೆಚ್ಚಾಗುತ್ತಿವೆ. ಇದು ಬೇಸರದ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.ಜಿಎಸ್‌ಟಿ ಕಡಿತ, ಭಾರತೀಯರಿಗೆ ಹೆಮ್ಮೆಯ ವಿಚಾರ:

ಕೇಂದ್ರ ಸರ್ಕಾರ ದೀಪಾವಳಿಗೆ ಭಾರತಕ್ಕೆ ಒಂದು ಕೊಡುಗೆಯನ್ನು ನೀಡಿದ್ದು, 140 ಕೋಟಿ ಭಾರತೀಯರಿಗೆ ಇದು ಹೆಮ್ಮೆಪಡುವ ವಿಚಾರ ಎಂದು ವೈದ್ಯ ಮಂಜುನಾಥ್ ಅವರು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು.ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಿಂದೂ ಧರ್ಮದಲ್ಲಿ ಅಸಮಾನತೆ ಇದೆ ಎಂದು ಹೇಳಿರುವ ಬಗ್ಗೆ ಸಂಸದರು, ನಾವುಗಳು ಎಲ್ಲರನ್ನು ಮನುಷ್ಯರಂತೆಯೇ ಕಾಣಬೇಕು. ನಮ್ಮಲ್ಲಿ ಮನುಷ್ಯತ್ವ ಕೂಡ ಇರಬೇಕು. ಇಷ್ಟೇ ಅಲ್ಲದೆ ಹೃದಯವಂತಿಕೆ ಬಹಳ ಮುಖ್ಯವಾದ ವಿಚಾರ. ಹೀಗಾಗಿ ನನಗೆ ಗೊತ್ತಿರುವುದು ಮನುಷ್ಯ ಜಾತಿ ಒಂದೇ. ಈ ದೃಷ್ಟಿಕೋನದಲ್ಲಿ ಸಿದ್ದರಾಮಯ್ಯನವರ ಹೇಳಿಕೆಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಹಾಗೇ ಜನರ ನಡುವೆ ಸಾಮರಸ್ಯ ಇದ್ದಾಗ ಧರ್ಮ ಸಂಘರ್ಷಗಳು ಉಂಟಾಗುವುದಿಲ್ಲ. ಹೀಗಾಗಿ ಜನರೇ ಇದರ ಬಗ್ಗೆ ಅರ್ಥ ಮಾಡಿಕೊಂಡಾಗ ದೇಶದಲ್ಲಿ ಕೋಮುಗಲಭೆಗಳು ಉಂಟಾಗುವುದಿಲ್ಲ ಎಂದು ತಿಳಿಸಿದರು.

ಸೆ. 22ರಿಂದ ನಡೆಯಲಿರುವ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಬಗ್ಗೆ ಪರ ವಿರೋಧಗಳ ಚರ್ಚೆ ನಡೆಯುತ್ತಿದ್ದು, ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬದಲಿಗೆ ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್​ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ, ಬಿಜೆಪಿ ಮುಖಂಡ ಚಿದಾನಂದ್, ಪುರಸಭಾ ಅಧ್ಯಕ್ಷ ಮೋಹನ್‌ಕೋಟೆ, ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ. ಎನ್. ಅಶೋಕ್, ಸಮಿತಿಯವರಾದ ಗಜಾನನ ಮನೋಹರ್, ಸತ್ಯನಾರಾಯಣ್, ಲ.ನಾ.ಗುಪ್ತ, ರವೀಂದ್ರ, ಮಹದೇವ್ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ