ಕನ್ನಡಪ್ರಭ ವಾರ್ತೆ ಕೊಲ್ಲೂರು ಕೊಲ್ಲೂರು ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ ದೇವಾಲಯದ ಆಡಳಿತ ಮಂಡಳಿಯ ನಕಲಿ ಸದಸ್ಯರೊಬ್ಬರು ಬೆಂಗಳೂರಿನ ಅಣ್ಣ ತಂಗಿಗೆ 30 ಲಕ್ಷ ರು.ಗೂ ಅಧಿಕ ಮೊತ್ತವನ್ನು ವಂಚಿಸಿದ ಘಟನೆ ನಡೆದಿದೆ. ಬೆಂಗಳೂರಿನ ದಿಲ್ನಾ (45) ಅವರು ಕಳೆದ ವರ್ಷ ತನ್ನ ಗಂಡ ಮತ್ತು ಮಕ್ಕಳೊಂದಿಗೆ ಕೊಲ್ಲೂರಿಗೆ ಬಂದಿದ್ದಾಗ, ಅಲ್ಲಿ ತನ್ನ ಅಣ್ಣ ದಿಲೀಶ್ ಅವರ ಪರಿಚಯದ ಸುಧೀರ್ ಕುಮಾರ್ ಎಂಬಾತನ ಭೇಟಿಯಾಯಿತು. ಆತ ತಾನು ಕೊಲ್ಲೂರು ದೇವಸ್ಥಾನ ದ ಆಡಳಿತ ಮಂಡಳಿಯ ಸದಸ್ಯನೆಂದು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ ಹಣ ಹಾಕುವಂತೆ ಹೇಳಿದ್ದ. ಅದನ್ನು ನಂಬಿದ್ದ ದಿಲ್ಮಾ ಅವರ ವಿದೇಶದಲ್ಲಿರುವ ಅಣ್ಣ ದಿಲೀಶ್ ಅವರು ಹಲವು ಭಾರಿ ಸುಧೀರ್ ಕುಮಾರ್ ಅವರ ಖಾತೆಗೆ ಹಣ ಹಾಕಿದ್ದರು. ಈ ನಡುವೆ ಸುಧೀರ್ ಅವರು ದಿಲ್ಮಾ ಅವರ ತಾಯಿಯ ಜಮೀನಿನ ಖಾತೆ ಬದಲಾವಣೆ ಮಾಡಿಸಿಕೊಡುವುದಾಗಿ ಹೇಳಿಯೂ ತನ್ನ ಖಾತೆಗೆ ಹಣ ಪಡೆದಿದ್ದರು ಮತ್ತು ತಾಯಿಯಿಂದ ಕೆಲವು ದಾಖಲೆಗಳಿಗೆ ಸಹಿ ಪಡೆದಿದ್ದರು. ನಂತರ ಅವರ ಬಗ್ಗೆ ಸಂಶಯದಿಂದ ದೇವಾಲಯದಲ್ಲಿ ವಿಚಾರಿಸಿದಾಗ ಸುಧೀರ್ ಕುಮಾರ್, ಕೊಲ್ಲೂರು ದೇವಾಲಯದ ಆಡಳಿತ ಮಂಡಳಿಯ ಸದಸ್ಯನೂ ಅಲ್ಲ, ಆತ ದಿಲೀಶ್ ಹೆಸರಿನಲ್ಲಿ ದೇವಸ್ಥಾನದಲ್ಲಿ ಯಾವುದೇ ಪೂಜೆ ಮಾಡಿಸಿಲ್ಲ, ಜಮೀನಿನ ಖಾತೆ ಬದಲಾವಣೆಯನ್ನು ಮಾಡಿಲ್ಲ ಎಂಬುದು ಪತ್ತೆಯಾಗಿದೆ. ಇದೀದ ದಿಲ್ಮಾ ಅವರು ತನ್ನಿಂದ ಮತ್ತು ಅಣ್ಣ ದಿಲೀಶ್ ಅವರಿಂದ ಸುಧೀರ್ ಕುಮಾರ್ ಒಟ್ಟು 30,73,600 ರು. ಪಡೆದು ವಂಚಿಸಿದ್ದಾರೆ ಎಂದು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.