300 ಕೋಟಿ ಬಾಕಿ ಹಣ ನೀಡಿ ವಾಯವ್ಯ ಸಾರಿಗೆಗೆ ಶಕ್ತಿ ಕೊಡಿ

KannadaprabhaNewsNetwork |  
Published : Jun 11, 2024, 01:31 AM IST
544 | Kannada Prabha

ಸಾರಾಂಶ

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ನೀಡಿದ ಭರವಸೆಯಂತೆ ಜೂ.11ರಿಂದ ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣವನ್ನು ಶುರು ಮಾಡಿತು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಗೆ ಭರ್ತಿ ಒಂದು ವರ್ಷ. ಯೋಜನೆಯಿಂದ ಮಹಿಳೆಯರು ಫುಲ್‌ ಖುಷ್‌. ಅತ್ತ ತನ್ನ ಶಕ್ತಿಯೂ ಹೆಚ್ಚಾಯಿತು ಎಂದು ಸರ್ಕಾರಕ್ಕೂ ಸಂತಸ. ಆದರೆ ಸಾರಿಗೆ ಸಂಸ್ಥೆಗೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಹಣ ಬರುತ್ತಿಲ್ಲ ಎಂಬ ಕೊರಗು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸರಿಸುಮಾರು ₹ 300 ಕೋಟಿಗೂ ಅಧಿಕ ಹಣ ಸರ್ಕಾರದಿಂದ ಬರಬೇಕಿದೆ.

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ನೀಡಿದ ಭರವಸೆಯಂತೆ ಜೂ.11ರಿಂದ ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣವನ್ನು ಶುರು ಮಾಡಿತು. ಇದರಿಂದ ಮಹಿಳೆಯರು ಆಧಾರ್‌ ಕಾರ್ಡ್‌ ಇಟ್ಟುಕೊಂಡು ಇಡೀ ರಾಜ್ಯಾದ್ಯಂತ ಪ್ರತಿದಿನ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆ ಪ್ರಾರಂಭವಾದ ಮೇಲೆಯೇ ಧಾರ್ಮಿಕ ಕ್ಷೇತ್ರಗಳು, ವಿವಿಧ ಪ್ರವಾಸಿ ತಾಣಗಳು ತುಂಬಿ ತುಳುಕುವಂತೆ ಆಗಿದ್ದು. ಅಲ್ಲಿನ ಆರ್ಥಿಕ ಚಟುವಟಿಕೆಗಳಿಗೂ ಈ ಯೋಜನೆ ಶಕ್ತಿ ತುಂಬಿದ್ದು ಸುಳ್ಳಲ್ಲ.

ಬೆಳಗಾವಿ, ಚಿಕ್ಕೋಡಿ, ಹಾವೇರಿ, ಗದಗ, ಬಾಗಲಕೋಟೆ, ಹುಬ್ಬಳ್ಳಿ ಗ್ರಾಮಾಂತರ, ಧಾರವಾಡ, ಹುಬ್ಬಳ್ಳಿ-ಧಾರವಾಡ ನಗರ, ಶಿರಸಿ ಹೀಗೆ ಬರೋಬ್ಬರಿ 6 ಜಿಲ್ಲೆಗಳ 9 ವಿಭಾಗಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಂಸ್ಥೆ ಹೊಂದಿದೆ. ಬರೋಬ್ಬರಿ 23,500 ಜನ ನೌಕರ ವರ್ಗವಿದೆ. ಪ್ರತಿನಿತ್ಯ ಕನಿಷ್ಠವೆಂದರೂ 4400ಕ್ಕೂ ಅಧಿಕ ಬಸ್‌ಗಳು ಓಡಾಡುತ್ತವೆ.

ಎಷ್ಟು ಪ್ರಯಾಣಿಕರೆಷ್ಟು? ಬಂದಿದ್ದೆಷ್ಟು?

ಈ ವರ್ಷದಲ್ಲಿ 52.12 ಕೋಟಿಗೂ ಹೆಚ್ಚಿನ ಪ್ರಯಾಣಿಕರು ಶಕ್ತಿ ಯೋಜನೆಯಡಿ ಪ್ರಯಾಣಿಸಿದ್ದಾರೆ. ಇವರ ಟಿಕೆಟ್ ಮೌಲ್ಯವೇ ಬರೋಬ್ಬರಿ ₹ 1310 ಕೋಟಿಗೂ ಅಧಿಕವಾಗಿದೆ. ₹998 ಕೋಟಿ ಸರ್ಕಾರದಿಂದ ಬಂದಿದೆ. ಇನ್ನು ₹ 312 ಕೋಟಿಗೂ ಅಧಿಕ ಹಣ ಸರ್ಕಾರದಿಂದ ಬರಬೇಕಿದೆ. ಪ್ರತಿತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಸರ್ಕಾರ ಮಹಿಳೆಯರು ಓಡಾಡಿದ ಟಿಕೆಟ್‌ ಮೌಲ್ಯ ಕೊಡುತ್ತಿದೆ. ಆದರೆ ಪೂರ್ಣವಾಗಿ ಕೊಡುತ್ತಲೇ ಇಲ್ಲ. ಕೆಲವೊಂದಿಷ್ಟು ಕೋಟಿ ರೂ.ಗಳನ್ನು ಬಾಕಿಯುಳಿಸಿಕೊಳ್ಳುತ್ತಲೇ ಇದೆ ಎಂದು ಸಂಸ್ಥೆಯ ಮೂಲಗಳು ತಿಳಿಸುತ್ತವೆ.

ಮೊದಲೇ ನಷ್ಟದಲ್ಲಿ:

ವಾಯವ್ಯ ಸಾರಿಗೆ ಸಂಸ್ಥೆ ಪ್ರಾರಂಭವಾಗಿ 26 ವರ್ಷಕ್ಕೂ ಅಧಿಕ ಕಾಲವೇ ಗತಿಸಿದೆ. ಆದರೆ ಈ ವರೆಗೂ ಒಂದೇ ಒಂದು ವರ್ಷವೂ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯಲು ಸಾಧ್ಯವಾಗಿಲ್ಲ. ಹೀಗಾಗಿ ಅದರ ಆಸ್ತಿಗಳನ್ನೆಲ್ಲ ಅಡವಿಟ್ಟು, ಅಥವಾ ಬೇರೆಯವರೆಗೆ ಬಾಡಿಗೆಯೋ, ಗುತ್ತಿಗೆ ಆಧಾರದ ಮೇಲೋ ಕೊಟ್ಟಿದ್ದು ಉಂಟು. ನಿವೃತ್ತರ ಪಿಂಚಣಿ, ಗ್ರ್ಯಾಚುಟಿ ಹಣ ಕೊಡಲು ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ. ಪ್ರತಿತಿಂಗಳು ನಿವೃತ್ತ ನೌಕರರು ಧರಣಿ ನಡೆಸುವುದು ಮಾಮೂಲಾಗಿದೆ.

ಹಾಗಂತ ಸಂಸ್ಥೆಯಾಗಲಿ, ಅಧ್ಯಕ್ಷರಾಗಲಿ ಪ್ರಯತ್ನ ಪಡುತ್ತಿಲ್ಲ ಅಂತೇನೂ ಇಲ್ಲ. ಸಂಸ್ಥೆಗೆ ಕನಿಷ್ಠ ₹ 1000 ಕೋಟಿಯಾದರೂ ವಿಶೇಷ ಅನುದಾನ ಕೊಡಿ ಎಂಬ ಬೇಡಿಕೆಯ ಮನವಿ ಪತ್ರವನ್ನು ಸರ್ಕಾರಕ್ಕೆ ಆಗಾಗ ಸಲ್ಲಿಸುತ್ತಲೇ ಇದೆ. ಆದರೆ ಸರ್ಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇದೀಗ ಶಕ್ತಿ ಯೋಜನೆಯ ಹಣವನ್ನು ಬಾಕಿಯುಳಿಸಿಕೊಂಡಿರುವುದಕ್ಕೆ ನೌಕರರ ವರ್ಗದಲ್ಲಿ ಆಕ್ರೋಶವನ್ನುಂಟು ಮಾಡಿದೆ. ಕೂಡಲೇ ಸಂಸ್ಥೆಗೆ ಶಕ್ತಿ ಯೋಜನೆಯಡಿ ಕೊಡಬೇಕಾದ ಹಣವನ್ನು ಬಿಡುಗಡೆ ಮಾಡಬೇಕು ಎಂಬುದು ನೌಕರರ ಆಗ್ರಹ.

ಅಧ್ಯಕ್ಷರೆಲ್ಲಿ?

ಶಾಸಕ ರಾಜು ಕಾಗೆ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಆದರೆ ಅಧಿಕಾರ ಸ್ವೀಕರಿಸಿದ ಬಳಿಕ ಚುನಾವಣೆ ನೀತಿ ಸಂಹಿತೆ ಎದುರಾಯಿತು. ಹೀಗಾಗಿ ಸಂಸ್ಥೆಯ ಬಗ್ಗೆ ಅವರಿಗೆ ಗಮನ ಕೊಡಲು ಸಾಧ್ಯವಾಗಿಲ್ಲ. ಇನ್ನು ಮೇಲಾದರೂ ಸಂಸ್ಥೆಯನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂಬುದು ಈ ಭಾಗದ ಜನರ ಆಶಯ.

ಶಕ್ತಿ ಯೋಜನೆಯಡಿ ₹1310 ಕೋಟಿ ಮೌಲ್ಯದ ಟಿಕೆಟ್‌ ಖರ್ಚಾಗಿದೆ. ಈ ಪೈಕಿ ₹ 998 ಕೋಟಿ ಸರ್ಕಾರ ಬಂದಿದೆ ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಜಗದಂಬಾ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಕನಿಷ್ಠ ಆದಾಯ ಮಿತಿ 3 ಲಕ್ಷ ರು.ಗೆ ಏರಿಕೆ: ಮುನಿಯಪ್ಪ
ಏ.1ರಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ