ಕರಾವಳಿ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ
ಕನ್ನಡಪ್ರಭ ವಾರ್ತೆ ಕಾರವಾರ
ಅಭಿವೃದ್ಧಿಯ ಅಡಿಪಾಯ ಹಾಕುವಾಗ ಸ್ವಲ್ಪ ಧೂಳು, ಗದ್ದಲ ಸಹಜ. ಆದರೆ ಕಟ್ಟಡ ನಿರ್ಮಾಣವಾದ ಮೇಲೆ ಅದು ಎಲ್ಲರಿಗೂ ಭದ್ರ ಸೂರು ನೀಡುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ನಗರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವಕ್ಕೆ ಆಗಮಿಸಿದ್ದ ಅವರು, ಕಾರ್ಯಕ್ರಮಕ್ಕೂ ಮುನ್ನ ಶಾಸಕರ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಕರಾವಳಿ ಜನರ ಪ್ರಮುಖ ಸಮಸ್ಯೆಯಾದ ಸಿಆರ್‌ಜೆಡ್ ನಿಯಮಗಳ ಸಡಿಲಿಕೆ ಬಗ್ಗೆಯೂ ಮಾತನಾಡಿದ ಡಿಸಿಎಂ, ಗೋವಾ ಮತ್ತು ಕೇರಳ ಮಾದರಿಯನ್ನು ಇಲ್ಲಿಯೂ ಅಳವಡಿಸಲು ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು. ಅರಣ್ಯ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ, ಪಂಚಾಯಿತಿ ದಾಖಲೆ ಹೊಂದಿರುವ, ಮೂರು ತಲೆಮಾರುಗಳಿಂದ ವಾಸಿಸುತ್ತಿರುವ ಬಡವರನ್ನು ಮತ್ತು 3 ಎಕರೆ ವರೆಗೆ ಜಮೀನು ಹೊಂದಿರುವ ಸಣ್ಣ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಎಂದು ಭರವಸೆ ನೀಡಿದರು.ರಾಜ್ಯದ ನೀರಿನ ಸದ್ಬಳಕೆಗಾಗಿ ನದಿ ಜೋಡಣೆ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಗಿದೆ. ಕೇಂದ್ರ (ಶೇ. 90) ಮತ್ತು ರಾಜ್ಯ (ಶೇ. 10) ಅನುದಾನದಡಿ ಈ ಯೋಜನೆ ಜಾರಿಯಾಗಲಿದೆ. ಇನ್ನು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಆಸ್ತಿಯಾಗಿದ್ದು, ಕೇವಲ 100-200 ಎಕರೆ ಜಮೀನಿನಲ್ಲಿ ನಡೆಯುವ ಈ ಯೋಜನೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.