ರಾಮನಗರ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಆ.13ರಂದು ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಒಂದೆರೆಡು ಸಂಘಟನೆಗಳು ಮಾತ್ರ ಬೆಂಬಲ ವ್ಯಕ್ತಪಡಿಸಿದ್ದು, ಅನೇಕ ಸಂಘಟನೆಗಳು ದೂರ ಉಳಿದಿವೆ
ರಾಮನಗರ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಆ.13ರಂದು ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಒಂದೆರೆಡು ಸಂಘಟನೆಗಳು ಮಾತ್ರ ಬೆಂಬಲ ವ್ಯಕ್ತಪಡಿಸಿದ್ದು, ಅನೇಕ ಸಂಘಟನೆಗಳು ದೂರ ಉಳಿದಿವೆ.
ಕರುನಾಡ ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಮಾತ್ರ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಅಂದು ರಾಮನಗರ ಐಜೂರು ವೃತ್ತದಲ್ಲಿ ಪ್ರತಿಭಟನೆ ಕೂಡ ಹಮ್ಮಿಕೊಂಡಿದೆ. ಈ ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಬಂದ್ ಗೆ ಬೆಂಬಲ ಇಲ್ಲವೆಂದು ಸ್ಪಷ್ಟಪಡಿಸಿದ್ದು, ಬೇರೆ ಸಂಘಟನೆಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಇನ್ನು ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಅಂಗಡಿ ಮುಂಗಟ್ಟುಗಳು, ಸಿನಿಮಾ ಮಂದಿರ, ಆಟೋ, ಸಾರಿಗೆ ಮತ್ತು ಖಾಸಗಿ ಬಸ್ ಗಳ ಸಂಚಾರ ಎಂದಿನಂತೆ ಇರಲಿವೆ. ಬಂದ್ ಕೇವಲ ಒಂದೆರೆಡು ಸಂಘಟನೆಗಳ ಪ್ರತಿಭಟನೆಗೆ ಸೀಮಿತಗೊಳ್ಳುವ ಸಾಧ್ಯತೆಗಳಿವೆ.
ಪೊಲೀಸ್ ಇಲಾಖೆ ಎಚ್ಚರಿಕೆ:ಆ.13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಕೆಲ ಸೂಚನೆಗಳನ್ನು ನೀಡಿದೆ. ಬಂದ್ ಕರೆ ಸಂಬಂಧ ಘನ ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘನೆ ಮಾಡುವಂತಿಲ್ಲ. ಒತ್ತಾಯಪೂರ್ವಕವಾಗಿ ಅಥವಾ ಬಲವಂತವಾಗಿ ಯಾವುದೇ ಶಾಲಾ-ಕಾಲೇಜು, ಸರ್ಕಾರಿ/ಖಾಸಗಿ ಸಂಸ್ಥೆಗಳನ್ನು ಮತ್ತು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವಂತಿಲ್ಲ, ಒಂದು ವೇಳೆ ಪ್ರಯತ್ನಿಸಿದ್ದಲ್ಲಿ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು.
ಬಂದ್ / ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕರ ಜೀವನಕ್ಕೆ ವಾಹನ ಮತ್ತು ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವಂತಿಲ್ಲ. ರಸ್ತೆ ತಡೆಗೆ ಮತ್ತು ವಾಹನಗಳ ಅಡ್ಡಗಟ್ಟುವಿಕೆಗೆ ಅವಕಾಶ ಇಲ್ಲ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವಂತಿಲ್ಲ. ಒಂದು ವೇಳೆ ಪ್ರಯತ್ನಿಸಿದ್ದಲ್ಲಿ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು.ಯಾವುದೇ ಕಾರಣಕ್ಕೂ ತುರ್ತು ಸೇವೆ ಮತ್ತು ಅಗತ್ಯ ವಸ್ತುಗಳ ಸಾಗಾಣಿಕೆ ಅಡ್ಡಿಪಡಿಸುವಂತಿಲ್ಲ. ರಸ್ತೆ / ಸಾರ್ವಜನಿಕ ಸ್ಥಳಗಳಲ್ಲಿ ಟಯರ್‌ಗಳನ್ನು ಹಾಕಿ ಬೆಂಕಿ ಹಚ್ಚಲು ಮತ್ತು ಯಾವುದೇ ಪ್ರತಿಕೃತಿಗಳನ್ನು ದಹನ ಮಾಡಲು ಅವಕಾಶವಿರುವುದಿಲ್ಲ.
ಬಂದ್ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆ ದಕ್ಕೆತರುವವರ ವಿರುದ್ಧ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು. ಯಾವುದೇ ಅಹಿತಕರ ಘಟನೆಗಳು ಕಂಡುಬಂದರೆ ತುರ್ತು ಸಹಾಯವಣಿ 112 / 9480802800 ಇಲ್ಲಿಗೆ ಕರೆ ಮಾಡುವುದು ಹಾಗೂ ಸ್ಥಳೀಯ ಪೊಲೀಸ್ ಠಾಣೆ / ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಮಾಹಿತಿ ನೀಡಬಹುದು. ಸಾರ್ವಜನಿಕರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.