ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಒಂದು ಸಸಿ ನೆಟ್ಟರೆ ಒಂದು ಜೀವ ಉಳಿಸಿದಂತೆ, ಹಸಿರು ಬೆಳೆಸಿದರೆ ಭವಿಷ್ಯವನ್ನು ಬೆಳೆಸಿದಂತೆ ಎಂಬ ಸಂದೇಶದೊಂದಿಗೆ ಹಸಿರು ಬೈಲಹೊಂಗಲ, ಸುಂದರ ಬೈಲಹೊಂಗಲ ನಿರ್ಮಾಣಕ್ಕೆ ಫೌಂಡೇಶನ್ ಬದ್ಧವಾಗಿದೆ ಎಂದು ಅಧ್ಯಕ್ಷ ಸುನೀಲ ಮರಕುಂಬಿ ಹೇಳಿದರು.ಬೆಳಗಾವಿ ರಸ್ತೆಯ ಬೊಳಣ್ಣವರ ಬಡಾವಣೆಯ ನಗರಸಭೆಯ ಉದ್ಯಾನವನದಲ್ಲಿ ಪರಿಸರ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಹಸಿರು ಮತ್ತು ಆರೋಗ್ಯಕರ ಭವಿಷ್ಯವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಮಾ ಭಾರತಿ ಸೇವಾ ಫೌಂಡೇಶನ್ (ರಿ.) ಆನಿಗೋಳ ವತಿಯಿಂದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾತೃಭೂಮಿಯ ಹಸಿರಿಗಾಗಿ-ನಮ್ಮೆಲ್ಲರ ಸಹಕಾರ ಅಗತ್ಯ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಫೌಂಡೇಶನ್ ವತಿಯಿಂದ ನಡೆಸುತ್ತಿದ್ದೇವೆ ಎಂದರು.ಇಂದಿನ ದಿನಗಳಲ್ಲಿ ಪರಿಸರ ನಾಶ, ಅರಣ್ಯ ಪ್ರದೇಶಗಳ ಕ್ಷೀಣತೆ, ಹೆಚ್ಚುತ್ತಿರುವ ಮಾಲಿನ್ಯ ಹಾಗೂ ಹವಾಮಾನ ಬದಲಾವಣೆಯಿಂದ ಪ್ರಕೃತಿಯ ಸಮತೋಲನಕ್ಕೆ ಧಕ್ಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಅರಿತುಕೊಂಡು ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವುದು ಅತ್ಯಂತ ಅಗತ್ಯವಾಗಿದೆ. ಸಸಿ ನೆಡುವುದು ಕೇವಲ ಒಂದು ದಿನದ ಕಾರ್ಯಕ್ರಮವಾಗದೇ ನೆಟ್ಟ ಸಸಿಗಳನ್ನು ನಿರಂತರವಾಗಿ ಸಂರಕ್ಷಿಸಿ ಬೆಳೆಸುವ ಮೂಲಕ ಪರಿಸರ ಕಾಳಜಿಯನ್ನು ಕಾರ್ಯರೂಪಕ್ಕೆ ತರಬೇಕು ಎಂಬ ಸಂದೇಶವನ್ನು ಫೌಂಡೇಶನ್ ಹೊಂದಿದೆ ಎಂದು ತಿಳಿಸಿದರು.ಪ್ರಗತಿಪರ ರೈತ ಶಂಕರ ಬೊಳಣ್ಣವರ ಮಾತನಾಡಿ, ಪ್ರತಿಯೊಬ್ಬರ ಸಣ್ಣ ಪ್ರಯತ್ನವೂ ಪರಿಸರದ ಸಂರಕ್ಷಣೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಲ್ಲದು. ಇಂದು ಮಾ ಭಾರತಿ ಸೇವಾ ಫೌಂಡೇಶನ್ ಈ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ನಾಳೆಯ ಪೀಳಿಗೆಗೆ ನೆರಳು, ಶುದ್ಧ ಗಾಳಿ ಮತ್ತು ಸುಂದರ ಪರಿಸರ ನೀಡುವ ಅಮೂಲ್ಯ ಕೊಡುಗೆಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಗುರು ಮೆಟಗುಡ್ಡ, ಮಾಜಿ ತಾಪಂ ಸದಸ್ಯ ಜಗದೀಶ ಬೂದಿಹಾಳ, ರಾಜೇಶ ಹಿರೆಮಠ, ಸುಭಾಸ ತುರಮರಿ, ಅಭಿಷೇಕ ಬೊಳಣ್ಣವರ, ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು, ಮಾ ಭಾರತಿ ಸೇವಾ ಫೌಂಡೇಶನ್ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.