ಧಾರವಾಡ: ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 31ನೇ ಚಾತುರ್ಮಾಸ್ಯದ ಅಂಗವಾಗಿ ನಗರದ ಕೆ.ಇ. ಬೋರ್ಡ್ ಶಾಲೆ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು. ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ನಡೆದ ಈ ಶಿಬಿರದಲ್ಲಿ ನೂರಾರು ಜನ ಭಾಗಿಯಾಗಿದ್ದರು.
ಇದೇ ವೇಳೆ ಆಯುರಾತ್ಮ ಆಯುರ್ವೇದ ಚಿಕಿತ್ಸೆ ಹಾಗೂ ಜಾಗೃತಿ ಶಿಬಿರವೂ ನಡೆಯಿತು. ಜಯಪ್ರಿಯಾ ನೇತ್ರ ಆಸ್ಪತ್ರೆ ವೈದ್ಯರಿಂದ ಕಣ್ಣಿನ ಉಚಿತ ತಪಾಸಣೆಯೂ ನಡೆಯಿತು. ವೈದ್ಯರಾದ ಡಾ. ಸಂಧ್ಯಾ ಕುಲಕರ್ಣಿ, ಡಾ. ಪ್ರವೀಣಕುಮಾರ ಕುಲಕರ್ಣಿ, ಡಾ. ಆದಿತ್ಯ ಪಾಂಡುರಂಗಿ, ಡಾ. ಸ್ವಪ್ನಾ ಪಾಂಡುರಂಗಿ, ಡಾ. ವಿನಯ್ ಧರ್ಮಾಧಿಕಾರಿ, ಡಾ. ರಮ್ಯಾ ಧರ್ಮಾಧಿಕಾರಿ, ಡಾ. ಸವಿತಾ ಕೊಪ್ಪರ ದೇಶಪಾಂಡೆ, ಡಾ. ಪವನ ದೇಶಪಾಂಡೆ ಪಾಲ್ಗೊಂಡಿದ್ದರು. ನಾಗರಾಜ ಕಲ್ಲಾಪುರ, ಶ್ರೀಕಾಂತ ದೇಶಪಾಂಡೆ, ವೆಂಕಟೇಶ ಮಹಿಷಿ ಶಿಬಿರವನ್ನು ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ31ನೇ ಚಾತುರ್ಮಾಸ್ಯದಲ್ಲಿ ದೇವರನಾಮ, ಹರಿನಾಮ ಭಜನೆ ಹಾಗೂ ಭರತನಾಟ್ಯದ ಪ್ರಸ್ತುತಿ ನಡೆಯಿತು. ಬೆಳಗ್ಗೆ ಹೊಸರಿತ್ತಿಯ ಅಂಜನಾ ಕುಲಕರ್ಣಿ ಅವರ ದೇವರನಾಮದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಅಥಣಿಯ ಶ್ರೀ ಸತ್ಯಾತ್ಮತೀರ್ಥ ಭಜನಾ ಮಂಡಳಿ, ಬೆಂಗಳೂರಿನ ಶ್ರೀ ಸುಶಮೀಂದ್ರತೀರ್ಥ ಭಜನಾ ಮಂಡಳಿ ಹಾಗೂ ಕಮಲಾಪುರದ ವಿಜಯ ವಿಠಲ ಭಜನಾ ಮಂಡಳಿ ವತಿಯಿಂದ ಹರಿನಾಮ ಭಜನೆಗಳು ನಡೆದವು. ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಧಾರವಾಡದ ಆಕಾಂಕ್ಷಾ ಮತ್ತು ಸಂಗಡಿಗರ ಭರತನಾಟ್ಯ ಪ್ರದರ್ಶನ ನಡೆಯಿತು. ಧಾರವಾಡದ ನಾರಾಯಣಿ ಭಜನಾ ಮಂಡಳಿ ಹಾಗೂ ಹುಬ್ಬಳ್ಳಿ ಶಕ್ತಿ ಕಾಲನಿಯ ರಾಧಾಕೃಷ್ಣ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮಗಳು ನಡೆದವು. ಸಮಾರೋಪದಲ್ಲಿ ಸನ್ನಿಧಿ ನಾರಾಯಣಾಚಾರ್ಯ ಪಾಂಡುರಂಗಿ ಅವರ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.