ಧಾರವಾಡ: ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಪೂರ್ಣ ನಿಷೇಧ ಮಾಡಿದ್ದರಿಂದ ಮಣ್ಣಿನ ಮೂರ್ತಿ ಪ್ರತಿಷ್ಠಾಪನೆ ಈಗ ಅನಿವಾರ್ಯ. ಆದರೆ, ಮನೆಗಳಲ್ಲಿ ಪ್ರತಿಷ್ಠಾಪಿಸಲು ಬೇಡಿಕೆಗೆ ತಕ್ಕಂತೆ ಮಣ್ಣಿನ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಜತೆಗೆ ದುಬಾರಿಯೂ ಹೌದು. ಈ ಹಿನ್ನೆಲೆ ನಗರದ ಮಾಳಮಡ್ಡಿಯ ಜೋಶಿ ಟ್ಯುಟೋರಿಯಲ್ಸ್‌ನಲ್ಲಿ ಎರಡು ದಿನಗಳ ಕಾಲ ಮಣ್ಣಿನ ಮೂರ್ತಿ ತಯಾರಿಯ ಕಾರ್ಯಾಗಾರ ನಡೆಯಿತು.
ವಿಶೇಷ ಎಂದರೆ, ಕಾರ್ಯಾಗಾರದಲ್ಲಿ ಭಾಗವಹಿಸಿದವರು ತಾವೇ ತಯಾರಿಸಿದ ಮೂರ್ತಿಗಳನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದು. ಕಾರ್ಯಾಗಾರದಲ್ಲಿ ಸಿದ್ಧವಾದ ಗಣೇಶ ಮೂರ್ತಿಗಳನ್ನು ನೋಡಿದರೆ, ಮಣ್ಣಿನ ಮೂರ್ತಿ ಕಲಾವಿದರೆ ಮಾಡಿದ ರೀತಿಯಲ್ಲಿದ್ದು, ತುಂಬ ಆಕರ್ಷಕವಾಗಿವೆ.
ಈ ಮೊದಲು ಬೆಂಗಳೂರಿನಲ್ಲಿ ನಾವು ಬಣ್ಣದ ಗಣಪತಿ ಪ್ರತಿಷ್ಠಾಪಿಸುತ್ತಿದ್ದು, ಮನೆಯಲ್ಲಿಯೇ ವಿಸರ್ಜನೆ ಹಿನ್ನೆಲೆಯಲ್ಲಿ ಅವು ತಿಂಗಳುಗಟ್ಟಲೇ ಕರಗುತ್ತಿರಲಿಲ್ಲ. ದೇವರೆಂದು ಪೂಜಿಸುವ ಗಣೇಶನ ಮೂರ್ತಿ ಕರಗದೇ ಕೆಲ ದಿನಗಳ ನಂತರ ಕೆಟ್ಟ ವಾಸನೆ ಬರುತ್ತಿರುವ ಹಿನ್ನೆಲೆ ನಾವೇ ಏತಕ್ಕೆ ಮಣ್ಣಿನ ಗಣಪತಿ ಮಾಡಬಾರದು ಎಂದು ಚಿಂತನೆ ಮಾಡಿದೆವು. ಕಲಾವಿದ ಪ್ರಮೋದ ಶಿಗ್ಗಾಂವ್ ಅವರ ಸಹಕಾರದಿಂದ ಮಣ್ಣಿನ ಮೂರ್ತಿ ಮಾಡುವುದನ್ನು ಕಲಿತೆವು. ಈಗಾಗಲೇ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಈ ಕಾರ್ಯಾಗಾರ ನಡೆಸುತ್ತಿದ್ದು, ಧಾರವಾಡದಲ್ಲಿ ಎರಡು ವರ್ಷಗಳಿಂದ ಈ ಕಾರ್ಯಾಗಾರ ಮಾಡುತ್ತಿದ್ದೇವೆ. ಡಾ. ಅಮಿತ ಹಾಗೂ ವಿನಾಯಕ ಜೋಶಿ ಅವರ ಸಹಕಾರದಿಂದ ಧಾರವಾಡದಲ್ಲಿ ಸಹಕಾರ ನೀಡಿದ್ದಾರೆ. ತೀವ್ರ ಆಸಕ್ತಿಯಿಂದ ಮೂವತ್ತು ಮಹಿಳೆಯರು, ಮಕ್ಕಳು ಆಗಮಿಸಿ ಅದ್ಭುತವಾಗಿ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ ಎಂದು ಆಪ್ತಿ ಸಂಸ್ಥೆಯ ಸಾರಿಕಾ ಗೋಡಖಿಂಡಿ ಹೇಳಿದರು.ಗಣಪತಿ ಮೂರ್ತಿ ನಾನೇ ತಯಾರಿ ಮಾಡಿ ಅದನ್ ಪೂಜೆ ಮಾಡಬೇಕೆಂತ ಆಸೆ ಇತ್ತು. ಆದರ, ಮೂರ್ತಿ ಮಾಡೋದನ್ನು ಎಲ್ಲಿ ಕಲೀಬೇಕೆಂತ ಗೊತ್ತಿರಲಿಲ್ಲ. ಗಣಪತಿ ಹಬ್ಬ ಸಮೀಪ ಬಂದಿದ್ದು, ಜೋಶಿ ಸರ್ ಮೂರ್ತಿ ಕಾರ್ಯಾಗಾರ ಐತಿ ಬರತೀರಂತ ಕೇಳಿದರು. ಅದಕ್, ಎರಡ ದಿನ ನಾನು ಹಾಗೂ ನನ್ನ ಮಗನ ಜತೆಗೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೇನೆ. ಸಾರಿಕಾ ಮೇಡಂ ಬಾಳ ಲಗೂನ್ ಮಣ್ಣಿನ ಮೂರ್ತಿ ಅಲ್ಲದೇ, ಕೈಯಿಂದಲೇ ಮೂರ್ತಿಗೆ ಅಲಂಕಾರ ಮಾಡುವುದನ್ನು ಕಲಿಸಿದರು. ಇದೊಂದು ಒಳ್ಳೆ ಅನುಭವ ಎಂದು ವರ್ಷಾ ಅಷ್ಟಗಿ ಖುಷಿ ವ್ಯಕ್ತಪಡಿಸಿದರು.
ಮಣ್ಣಿನ ಮೂರ್ತಿ ಪೂಜೆಗೆ ಶ್ರೇಷ್ಠ