ಕಲ್ಯಾಣ ಕರ್ನಾಟಕದಲ್ಲಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭ: ದರ್ಶನಾಪೂರ

KannadaprabhaNewsNetwork |  
Published : Feb 07, 2024, 01:47 AM ISTUpdated : Feb 07, 2024, 01:48 AM IST
ಸುರಪುರ ತಾಲೂಕಿನ ಕೆಂಭಾವಿ ಸಮೀಪದ ನಗನೂರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಉದ್ಘಾಟಿಸಿದರು. | Kannada Prabha

ಸಾರಾಂಶ

ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲಿ ಸುಮಾರು 3.50 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿದ ಸಚಿವ ಶರಣಬಸಪ್ಪಗೌಡ ದರ್ಶನಾಪೂರ.

ಕನ್ನಡಪ್ರಭ ವಾರ್ತೆ ಸುರಪುರ

ಕಲ್ಯಾಣ ಕರ್ನಾಟಕ ಭಾಗದಲ್ಲಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಸರ್ಕಾರ ತೀರ್ಮಾನಿಸಿದ್ದು, ಈಗಾಗಲೆ ಈ ಕೆಲಸ ಪ್ರಗತಿಯಲ್ಲಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಶೈಕ್ಷಣಿಕ ಕ್ಷೇತ್ರಕ್ಕೆ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಹಣ ಮೀಸಲಿರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ತಾಲೂಕಿನ ಕೆಂಭಾವಿ ಸಮೀಪದ ನಗನೂರ ಗ್ರಾಮದಲ್ಲಿ ಸುಮಾರು 3.50 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ, ಜನತೆ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು ಈ ಹಿನ್ನೆಲೆಯಲ್ಲಿ ಹಲವು ಯೋಜನೆ ಜಾರಿಗೆ ತರಲಾಗಿದೆ ಎಂದರು.

ಜಿಲ್ಲೆಯಲ್ಲಿ ನೂತನವಾಗಿ ಪ್ರಾಥಮಿಕ ಕೇಂದ್ರ ಸ್ಥಾಪಿಸಲು ಈಗಾಗಲೆ ಹಲವು ಗ್ರಾಮ ಆಯ್ಕೆ ಮಾಡಿದ್ದು ಕೆಲವೆ ದಿನಗಳಲ್ಲಿ ಆರೋಗ್ಯ ಕೇಂದ್ರದ ಕಟ್ಟಡಗಳಿಗೆ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.

ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನೂತನವಾಗಿ ಕೃಷಿ ಹೊಂಡ ತೆರೆಯಲು ಸರ್ಕಾರ ಸಮ್ಮತಿ ಸೂಚಿಸಿದ್ದು ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದ ಅವರು, ನಗನೂರ-ಕೆಂಭಾವಿ ಮುಖ್ಯ ರಸ್ತೆ ಅಭಿವೃದ್ಧಿಗೆ ಬದ್ಧನಾಗಿದ್ದು ಜನತೆ ಸಹಕಾರ ಕೊಟ್ಟರೆ ಶೀಘ್ರ ಅನುದಾನ ಒದಗಿಸಿ ಉತ್ತಮ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಆರ್. ವಿ. ನಾಯಕ ಮಾತನಾಡಿ, ನಗನೂರ ಗ್ರಾಮದ ಒಂದೆ ಸ್ಥಳದಲ್ಲಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಏಕಕಾಲದಲ್ಲಿ 13 ಕೋಟಿ ರು. ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿಯೇ ಮೊಟ್ಟಮೊದಲು ಈ ಕಾರ್ಯಕ್ಕೆ ಶ್ರಮ ವಹಿಸಿದ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರನ್ನು ನಮ್ಮ ಇಲಾಖೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಶರಣ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಕೆ. ವಿಜಯಕುಮಾರ, ಗ್ರಾಪಂ ಉಪಾಧ್ಯಕ್ಷೆ ಯಮನಮ್ಮ ಮಳ್ಳಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ್, ಡಿಎಚ್‌ಓ ಡಾ. ಪ್ರಭುಲಿಂಗ ಮಾನಕರ್, ತಾಪಂ ಅಧಿಕಾರಿ ಬಸವರಾಜ ಸಜ್ಜನ್, ಬಿಇಒ ಯಲ್ಲಪ್ಪ ಕಾಡ್ಲೂರ, ತಾಲೂಕು ವಿವಿಧ ಇಲಾಖೆಯ ಅಧಿಕಾರಿಗಳಾದ ಶಿವಕುಮಾರ, ಅನಿಲಕುಮಾರ ಕಾಂಬ್ಳೆ, ಶೃತಿ, ಮುಖಂಡರಾದ ಶಂಕ್ರಣ್ಣ ವಣಕ್ಯಾಳ, ಶಿವರಾಜ ಬೂದೂರ, ಸಿದ್ರಾಮರೆಡ್ಡಿ ಗೂಗಲ್ ಸೇರಿದಂತೆ ಇತರರಿದ್ದರು. ಶ್ರೀಮಂತ ತಿಪ್ಪಶೆಟ್ಟಿ ನಿರೂಪಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ