ಕುರುಗೋಡು: ತಾಲೂಕಿನ ಬೈಲೂರು ಗ್ರಾಮದ ಹೊರವಲಯದಲ್ಲಿ ನವೋದಯ ಶಾಲೆ ಪ್ರಾರಂಭಿಸಲು ಸರ್ಕಾರದ ಮೇಲೆ ಒತ್ತಡ ತರಲಾಗಿದೆ ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.
ತಾಲೂಕಿನಲ್ಲಿರುವ ಶಿಕ್ಷಕರಿಗೆ ಸಮಸ್ಯೆ ಕುರಿತು ಸರ್ಕಾರ ಮಟ್ಟದಲ್ಲಿ ಗಮನ ಸೆಳೆಯುವ ಜತೆಗೆ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಕುರುಗೋಡಿನಲ್ಲಿ ಗುರುಭವನ ನಿರ್ಮಾಣಕ್ಕೆ ಸ್ಥಳ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಂಪ್ಲಿ ಮತ್ತು ಕುರುಗೋಡು ತಾಲೂಕಿನಲ್ಲಿ ಗಾಂಧಿ ತತ್ವಾಧಾರಿತ ಬಾಲಕಿಯರ ವಸತಿ, ಮೊರಾರ್ಜಿದೇಸಾಯಿ ವಸತಿ ಶಾಲೆ, ಕಾರ್ಮಿಕ ಮಕ್ಕಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಜಿಟಿಟಿಸಿ ಕಾಲೇಜು ನಿರ್ಮಾಣಕ್ಕೆ ₹೩೫೦ ಕೋಟಿ ಅನುದಾನದ ನೀಡಲಾಗಿದೆ. ಕಂಪ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೮ ಕೆಪಿಎಸ್ ಶಾಲೆಗಳು ಮಂಜೂರಾಗಿವೆ. ಮೂಲಸೌಕರ್ಯಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ₹೫ ಕೋಟಿ ಅನುದಾನ ಮೀಸಲಿರಿಸಲಾಗಿದೆ ಎಂದರು.ಬಿಇಒ ಟಿ.ಎಂ. ಸಿದ್ಧಲಿಂಗ ಮೂರ್ತಿ ಮಾತನಾಡಿ ಶೈಕ್ಷಣಿಕವಾಗಿ ತಾಲೂಕು ಉತ್ತಮ ಸಾಧನೆ ಮಾಡುತ್ತಿದೆ. ಇಲಾಖೆಯ ಸಮಸ್ಯೆಗೆ ಸದಾ ಸ್ಪಂದಿಸುವ ಶಾಸಕರ ನೆರವಿನಿಂದ ಶಿಕ್ಷಣ ಕ್ಷೇತ್ರವು ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಿದೆ. ಅವರ ಸಹಕಾರ ಹೀಗೆ ಮುಂದುವರೆಯಲಿ ಎಂದರು.
ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಿಂಗಪ್ಪ ಮಾತನಾಡಿ, ಆದಾಯ ಇಲ್ಲ ಎಂದು ಕಡೆಗಣನೆಗೆ ಪಾತ್ರವಾಗಿರುವ ಶಿಕ್ಷಣ ಇಲಾಖೆ ಮಾನವ ಸಂಪನ್ಮೂಲಗಳನ್ನು ಸೃಷ್ಟಿಸಿ ಕೊಡುಗೆ ನೀಡುತ್ತಿದೆ ಎನ್ನುವುದನ್ನು ಮರೆಯಬಾರದು ಎಂದರು.ಶಿಕ್ಷಕರಿಗೆ ಇಲಾಖೆಯ ಕಾರ್ಯಭಾರ ಹೆಚ್ಚಾಗಿರುವುದರಿಂದ ಮತಗಟ್ಟೆ ಅಧಿಕಾರಿಗಳ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಹಂತೇಶ್ ಮೇಟಿ ಮತ್ತು ಜಿಲ್ಲಾ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.ಕವನ ಸಂಕಲನ ಬಿಡುಗಡೆ: ಶಿಕ್ಷಕ ಗವಿಸಿದ್ದಪ್ಪ ಅಲ್ಲಾನಗರ ಅವರು ರಚಿಸಿದ ‘ಮನಸ್ಸಿನ ಮಾರ್ಕೆಟ್’ ಕವನ ಸಂಲಕನನ್ನು ಶಾಸಕ ಜೆ.ಎನ್.ಗಣೇಶ್ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಲಿಂಗಪ್ಪ ಕೆ.ಹಂದ್ಯಾಳ್ ಬಿಡುಗಡೆಗೊಳಿಸಿದರು. ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ನಾಲ್ಕು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನಾಲ್ಕು ಕೇಂದ್ರ ಸಾಹಿತ್ಯ ಪ್ರಶಸ್ತಿ ಪಡೆದಿರುವುದು ಪ್ರಾಥಮಿಕ ಶಿಕ್ಷಕರು ಎಂಬುವುದು ಹೆಮ್ಮೆಯ ಸಂಗತಿಯಾಗಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಈ ಬಾರಿ ಬಳ್ಳಾರಿಯಲ್ಲಿ ನಡೆಯಲಿದ್ದು ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದರು.
ತಾಲೂಕು ಅಧ್ಯಕ್ಷ ತುಕಾರಾಂ ಗೊರವಾ, ಹಾಗೂ ಕಸಾಪ ಅಧ್ಯಕ್ಷ ನಾಗರಾಜ ಮಸೂತಿ, ಶಾಸಕರಿಗೆ ಶಿಕ್ಷಕರ ಬೇಡಿಕೆ ಕುರಿತು ಮನವಿ ಸಲ್ಲಿಸಿದರು.ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ತಾಲ್ಲೂಕು ಪಂಚಾಯಿತಿ ಇಒ ಕೆವಿ. ನಿರ್ಮಲ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮನೋಹರ, ಕೆ. ಹನುಮಂತಪ್ಪ, ಬಿ.ಎರಿಸ್ವಾಮಿ, ಗುಂಡಪ್ಪ ನಾಗರಾಜ, ಸಣ್ಣ ಮಾರೆಪ್ಪ, ಪಿ ಎಂ ಪೋಷಣ್,ಶಿವನ ನಾಯಕ್, ಮಲ್ಲಿಕಾರ್ಜುನ, ಶಿಕ್ಷಕರ, ಪದ್ಮಾರೆಡ್ಡಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಹಾಂತೇಶ ಮೇಟಿ, ರಾಜ್ಯಮಟ್ಟದ ಯೋಗಾಸನ ಚಿನ್ನದ ಪದಕ ಪುರಸ್ಕೃತೆ ಎಂ ಆರ್ ವನಜಾಕ್ಷಮ್ಮ, ಮತ್ತು ತುಳಸ ಬಾಯಿ ಹ.ಪವಾರ್, ಸಂತೋಷ ,ಜಡೇಶ್, ಶಿಕ್ಷಕಿ ಅನಿತಾ ,ಬೋರಮ್ಮ ಕೆಂಬಾವಿ ಇದ್ದರು.